ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ಹತ್ತು ವರ್ಷಗಳ ಹಿಂದೆ ದಲಿತರು ಹಾಗೂ ಸವರ್ಣೀಯರ ನಡುವೆ ನಡೆದ ಜಾತಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಒಟ್ಟು 98 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಇನ್ನೂ ಮೂವರಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
98 ಜನರಿಗೆ ತಲಾ 5000 ದಂಡ ಹಾಕಲಾಗಿದೆ. ಉಳಿದ ಮೂವರು ಎಸ್ಸಿ ಎಸ್ಟಿ ಸಮುದಾಯಕ್ಕೆ ಸೇರಿದ್ದರಿಂದ ಅವರಿಗೆ ಅಟ್ರಾಸಿಟಿ ಕಾಯ್ದೆ ಅನ್ವಯವಾಗಿಲ್ಲ. ಹೀಗಾಗಿ ಅವರಿಗೆ ಕೊಲೆ ಯತ್ನ, ದೊಂಬಿ ಸೇರಿದಂತೆ ಇನ್ನಿತರ ಸೆಕ್ಷನ್‌ನಲ್ಲಿ ತಲಾ ಐದು ವರ್ಷ ಜೈಲು ಹಾಗೂ ಎರಡು ಸಾವಿರ ದಂಡ ವಿಧಿಸಿ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ನ್ಯಾಯಾಧೀಶ ಸಿ.ಚಂದ್ರಶೇಖರ್ ಆದೇಶ ನೀಡಿದ್ದಾರೆ.
2014ರ ಆಗಸ್ಟ್ 28 ರಂದು ಸವರ್ಣೀಯರು ಮತ್ತು ದಲಿತ ಸಮುದಾಯದವರ ನಡುವೆ ಸಂಘರ್ಷ ನಡೆದಿತ್ತು. ಈ ಸಂಬಂಧ ಅಟ್ರಾಸಿಟಿ, ಹಲ್ಲೆ, ಜೀವ ಬೆದರಿಕೆ ಪ್ರಕರಣ ದಾಖಲಾಗಿತ್ತು. ಇದೇ ಅಕ್ಟೋಬರ್ 21 ರಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಧೀಶರು 101ಆರೋಪಿಗಳನ್ನು ಅಪರಾಧಿಗಳು ಎಂದು ತೀರ್ಪು ನೀಡಿ ಇಂದಿಗೆ ಶಿಕ್ಷೆ ಪ್ರಮಾಣ ತೀರ್ಪು ಕಾಯ್ದಿರಿಸಿತ್ತು. ಇದೀಗ ನ್ಯಾಯಾಲಯ ಅಂತಿಮ ತೀರ್ಪು ಪ್ರಕಟಿಸಿದೆ.
2014ರ ಆಗಸ್ಟ್ 28 ರಂದು ಗಂಗಾವತಿಯ ಶಿವ ಚಿತ್ರಮಂದಿರದಲ್ಲಿ ಮರಕುಂಬಿ ಗ್ರಾಮದ ದಲಿತ ಸಮುದಾಯದವರು ಸಿನಿಮಾ ನೋಡಲು ಹೋಗಿದ್ದರು. ಈ ಸಮಯದಲ್ಲಿ ಟಿಕೆಟ್ ಪಡೆಯೋ ವಿಚಾರದಲ್ಲಿ ಅದೇ ಗ್ರಾಮದ ಸವರ್ಣೀಯರು ನಡುವೆ ಜಗಳ ನಡೆದಿತ್ತು. ಸಿನಿಮಾ ಮುಗಿದ ಬಳಿಕ ಸಂಜೆ ಗ್ರಾಮದ ಸವರ್ಣೀಯರು ಇದೇ ವಿಚಾರದ ನೆಪದ ಮೇಲೆ ದಲಿತರ ಮನೆಗಳಿಗೆ ನುಗ್ಗಿ ಅವರ ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದರು.