ಬೆಂಗಳೂರು: ಮುಂಗಾರು ಪೂರ್ವ ಮಳೆಗೆ ಬೆಂಗಳೂರಿನ ಹಲವೆಡೆ ಅವಾಂತರ ಸೃಷ್ಟಿಯಾಗಿದ್ದು, ಅಲ್ಲಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಮುಂದಿನ ದಿನಗಳಲ್ಲಿ ಮುಂಗಾರು ಮಳೆ ರಾಜ್ಯದಲ್ಲಿ ಅಬ್ಬರಿಸುವ ಮುನ್ಸೂಚನೆ ಇದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಇಂದು(ಮೇ.22) ಮುಂಜಾಗರೂಕತೆ ಕ್ರಮಗಳನ್ನು ಪರಿಶೀಲಿಸಲು ಬೆಂಗಳೂರು ನಗರ ಪ್ರದಕ್ಷಿಣೆ ನಡೆಸಿದ್ದಾರೆ.
ಬೆಂಗಳೂರಿನ ನಾಯಂಡಹಳ್ಳಿ, ಬಿಟಿಎಂ ಮೆಟ್ರೀ ಸ್ಟೇಷನ್, ಕೋಡಿ ಚಿಕ್ಕನಹಳ್ಳಿ, ಸಿಲ್ಕ್ ಬೋರ್ಡ್, ಹೊಸರು ಮುಖ್ಯ ರಸ್ತೆ ಸೇರಿದಂತೆ ವಿವಿಧೆಡೆ ನಡೆದಿರುವ ರಾಜಕಾಲುವೆ ಕಾಮಗಾರಿ ಹಾಗೂ ಅಲ್ಲಿನ ಸಮಸ್ಯೆಗಳನ್ನು ಸಿಎಂ ಹಾಗೂ ಡಿಸಿಎಂ ಖುದ್ದು ಪರಿಶೀಲಿಸಿದರು.
ಮಳೆ ಹಾನಿ ಪ್ರದೇಶಗಳಿಗೆ ಭೆಟಿ ನೀಡಿದ ಸಿಎಂ, ಮಳೆ ಬಂದಾಗ ಕೆರೆಯಂತಾಗುತ್ತಿದ್ದ ಸಿಲ್ಕ್ ಬೋರ್ಡ್ ಜಂಕ್ಷನ್ ವೀಕ್ಷಿಸಿದರು. ಈ ವೇಳೆ ಸ್ಥಳೀಯರು ಸಮಸ್ಯೆಗಳ ಬಗ್ಗೆ ಸಿಎಂ, ಡಿಸಿಎಂಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಸಿಎಂ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುಖ್ಯಮಂತ್ರಿಗಳ ಸೂಚನೆ: ಮಳೆ ನೀರು ಸರಾಗವಾಗಿ ಹರಿದುಹೋಗಲು ಹೆಚ್ಚುವರಿ ರಾಜಕಾಲುವೆ ಅಗತ್ಯವಿದೆ. ಏಳು ಕೋಟಿ ವೆಚ್ಚದ ಕಾಮಗಾರಿ ಅನುಮೋದನೆಯಾಗಿದೆ. ಹಣಕಾಸು ಇಲಾಖೆ ಹಾಗೂ ಕಂದಾಯ ಇಲಾಖೆ ಅನುಮೋದಗಾಗಿ ಸಿಎಂ ಸೂಚಿಸಿ, ಕೂಡಲೇ ಬಿಬಿಎಂಪಿಯು ಕಾಮಗಾರಿ ಕೈಗೊತ್ತಿಕೊಳ್ಳಲು ಅನುವು ಮಾಡಿಕೊಟ್ಟರು.
ಸುಗಮ ಸಂಚಾರಕ್ಕೆ ಬಿಟಿಎಂನಿಂದ ಬನಶಂಕರಿ ಕಡೆಗೆ ಹೋಗುವಾಗ ರಾಘವೇಂದ್ರ ಸ್ವಾಮಿ ದೇವಾಸ್ಥಾನ ಸರ್ಕಲ್, ಜಯನಗರ ೫ನೇ ಬ್ಲಾಕ್‌ನಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ಬೇಡಿಕೆ ಇದ್ದು, ಇಲ್ಲಿ ಅಂಡರ್ ಪಾಸ್ ನಿರ್ಮಿಸಲು ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು.
ಕೋಡಿ ಚಿಕ್ಕನಹಳ್ಳಿ ರಾಜಕಾಲುವೆಯಿಂದ ನೀರು ಹರಿದು ಮನೆಗಳಿಗೆ ನುಗ್ಗುತ್ತಿದ್ದು, ಇಲ್ಲಿನ ಪ್ರವಾಹ ನಿಂಯತ್ರಣಕ್ಕೆ ಜಾಕ್‌ವೆಲ್ ಮೂಲಕ ರಾಜಕಾಲುವೆಯಿಂದ ಹೊರ ಬರುವ ನೀರನ್ನು ಪಂಪ್ ಮಾಡಿ ಮಡಿವಾಳ ಕೆರೆಗೆ ಹರಿಸಲು ಸೂಚನೆ ನೀಡಿದರು.
ಒಟ್ಟಾರೆ ಬೆಂಗಳೂರಿಗೆ ಮಳೆಯಿಂದಾಗುವ ಅನಾಹುತ ಹಾಗೂ ಸಂಚಾರ ದಟ್ಟಣೆಯ ಕಿರಿಕಿರಿಯನ್ನು ತಪ್ಪಿಸಲು ಅಧಿಕಾರಿಗಳಿಗೆ ಸಲಹೆ, ಸೂಚನೆಗಳನ್ನು ನೀಡಿದ್ದಾರೆ.





