ಬೆಂಗಳೂರು: ಮುಡಾ ಹಗರಣ ಸಂಬಂಧ ಸಿಎಂ ಸಿದ್ಧರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ. ಇದು ಕ್ಯಾಬಿನೆಟ್ ಸಲಹೆ ತಿರಸ್ಕರಿಸಿ ನೀಡಿರುವಂತ ಆದೇಶವಾಗಿದೆ ಎಂಬುದಾಗಿ ಸಿಎಂ ಸಿದ್ಧರಾಮಯ್ಯ ಪರವಾಗಿ ಮನು ಸಿಂಘ್ವಿ ವಾದಿಸಿದರು.
ಇಂದು ಹೈಕೋರ್ಟ್ ಗೆ ಸಿಎಂ ಸಿದ್ಧರಾಮಯ್ಯ ಅವರು ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದಂತ ಅರ್ಜಿಯ ವಿಚಾರಣೆ ನಡೆಸಲಾಗುತ್ತಿದೆ.
ಈ ವೇಳೆ ಸಿಎಂ ಸಿದ್ಧರಾಮಯ್ಯ ಪರವಾಗಿ ವಾದ ಆರಂಭಿಸಿದಂತ ಹಿರಿಯ ವಕೀಲ ಮನು ಸಿಂಘ್ವಿ ಅವರು, ಕ್ಯಾಬಿನೆಟ್ ಸಲಹೆಯನ್ನು ತಿರಸ್ಕರಿಸಿ ಆದೇಶವನ್ನು ನೀಡುವಂತಿಲ್ಲ ಎಂಬುದಾಗಿ ಹೇಳಿದರು. ಅಲ್ಲದೇ ಇದಕ್ಕೆ ಸಂಬಂಧಿಸಿದಂತ ಮಧ್ಯಪ್ರದೇಶದ ತೀರ್ಪುಗಳನ್ನು ಉಲ್ಲೇಖಿಸಿದರು.
ರಾಜ್ಯಪಾಲರಿಗೆ ಸಲಹೆ ನೀಡುವ ಸಂಬಂಧದ ಕ್ಯಾಬಿನೆಟ್ ಸಭೆಯಲ್ಲೂ ಸಿದ್ಧರಾಮಯ್ಯ ಭಾಗಿಯಾಗಿಲ್ಲ. ರಾಜ್ಯ ಸಚಿವ ಸಂಪುಟ ಸಭೆಯಿಂದ ಹೊರಗೆ ಉಳಿದಿದ್ದಾರೆ. ಇಂತಹ ಸಚಿವ ಸಂಪುಟ ಸಭೆಯಲ್ಲಿ ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡದಂತೆ ಸಲಹೆ ಮಾಡಿದ್ದಾರೆ. ಹೀಗಿದ್ದರೂ ಕ್ಯಾಬಿನೆಟ್ ಸಲಹೆಯನ್ನು ತಿರಸ್ಕರಿಸಿ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ ಎಂದರು.
ಇನ್ನೂ ರಾಜ್ಯಪಾಲರಿಗೆ ಸಿಎಂ ಸಿದ್ಧರಾಮಯ್ಯ ಅವರ ವಿರುದ್ಧ ಮುಡಾ ಹಗರಣ ಸಂಬಂಧ ದೂರು ನೀಡಿದಂತ ಕೆಲವೇ ಕ್ಷಣಗಳಲ್ಲಿ ಶೋಕಾಸ್ ನೋಟಿಸ್ ನೀಡಿದ್ದಾರೆ ಎಂಬುದಾಗಿಯೂ ಹೈಕೋರ್ಟ್ ಗಮನಕ್ಕೆ ಸಿಎಂ ಸಿದ್ಧರಾಮಯ್ಯ ಪರ ಹಿರಿಯ ವಕೀಲ ಮನು ಸಿಂಘ್ವಿ ತಂದರು.