ಮಂಗಳೂರು : ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಡ್ರಗ್ಸ್ ಜಾಲವನ್ನು ಭೇದಿಸಿರುವ ಇಲ್ಲಿನ ಸಿಸಿಬಿ ಪೊಲೀಸರು, ಪ್ರಕರಣದಲ್ಲಿ ಆಫ್ರಿಕಾ ಮೂಲದ ಇಬ್ಬರು ಮಹಿಳೆಯನ್ನು ಬಂಧಿಸಿದ್ದಾರೆ. ಅವರಿಂದ 37.5 ಕೆಜಿ ತೂಕದ ಎಂಡಿಎಂಎ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು ಇದರ ಮೌಲ್ಯ 74 ಕೋಟಿ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ದಕ್ಷಿಣ ಆಫ್ರಿಕಾ ಮೂಲದ ಬಂಬಾ ಫಾಂಟಾ(31) ಹಾಗೂ ಅಬಿಗೈಲ್ ಅಡೋನಿಸ್ (30)ಎಂಬ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದ್ದು, ಕಳೆದ 6 ತಿಂಗಳಿಂದ ಈ ಬೃಹತ್ ಕಾರ್ಯಾಚರಣೆ ನಡೆದಿದೆ. ರಾಜ್ಯದ ಅತ್ಯಂತ ದೊಡ್ಡ ಡ್ರಗ್ಸ್ ಇದಾಗಿದೆ. ಈಗಾಗಲೇ ಡ್ರಗ್ಸ್ ಮಾಫಿಯಾದ ಕಿಂಗ್ ಪಿನ್ ಅಬ್ದುಲ್ ಫೈಸಲ್‍ನನ್ನು ಬಂಧಿಸಲಾಗಿದ್ದು ಆತನಿಂದ ಪೊಲೀಸರು ಸಜೀವ ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ. ಇಷ್ಟೊಂದು ಪ್ರಮಾಣದಲ್ಲಿ ಎಂಡಿಎಂಎ ವಶಪಡಿಸಿಕೊಂಡಿದ್ದ ಇದೇ ಮೊದಲು ಎಂದು ಭಾನುವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನವ ಮಂಗಳೂರು ಸಿಸಿಬಿ ಪೊಲೀಸರು ದೊಡ್ಡ ಕಾರ್ಯಾಚರಣೆ ನಡೆಸಿದ್ದಾರೆ. ರಾಜ್ಯದ ಇತಿಹಾಸದಲ್ಲೇ ದೊಡ್ಡ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಡಿದ್ದೇವೆ. 6 ತಿಂಗಳ ಹಿಂದೆ ಮಂಗಳೂರಿನ ಪಂಪ್ ವೆಲ್ ಬಳಿ ಹೈದರ್ ಎಂಬವನನ್ನು ಬಂದಿಸಿದ್ದೆವು. ಆತನಿಂದ 15 ಗ್ರಾಂ ಡ್ರಗ್ ವಶಪಡಿಸಿದ್ದೆವು. ಆತನಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದವರ ಬಂಧನಕ್ಕೆ ಸಿಸಿಬಿ ಪೊಲೀಸರು ಆರು ತಿಂಗಳಿನಿಂದ ಕಾರ್ಯಾಚರಣೆ ಮಾಡುತ್ತಿದ್ದರು. ಈ ನಡುವೆ ಬೆಂಗಳೂರಿನಲ್ಲಿ ನೆಲೆಸಿದ್ದ ನೈಜೀರಿಯಾ ಪ್ರಜೆ ಪೀಟರ್‍ನನ್ನು ಬಂಧಿಸಿದ್ದೆವು. ಆತನಿಂದ 6 ಕೆಜಿ ಎಂಡಿಎಂಎ ವಶಪಡಿಸಿಕೊಂಡಿದ್ದೆವು. ಆತನ ವಿಚಾರಣೆ ನಂತರ ಮತ್ತೆ ಕಾರ್ಯಾಚರಣೆ ಮಾಡಿ ಈ ಇಬ್ಬರು ಮಹಿಳೆಯರನ್ನು ಬಂಧಿಸಿದ್ದೇವೆ.
ದೆಹಲಿಯಿಂದ ಬೆಂಗಳೂರಿಗೆ ವಿಮಾನ ಮೂಲಕ ಬಂದಿದ್ದರು. ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದಲ್ಲಿ ಇಬ್ಬರನ್ನೂ ಬಂಧಿಸಿದ್ದೇವೆ ಎಂದು ಆಯುಕ್ತರು ತಿಳಿಸಿದ್ದಾರೆ.
ಅವರಿಂದ 75 ಕೋಟಿ ಮೌಲ್ಯದ 37.878 ಕೆಜಿ ಎಂಡಿಎಂಎ ವಶಪಡಿಸಿಕೊಂಡಿದ್ದೇವೆ. 4 ಮೊಬೈಲ್ ಫೋನ್, 2 ಪಾಸ್ ಪೋರ್ಟ್, ಟ್ರಾಲಿ ಬ್ಯಾಗ್ , 18,460 ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಜಾಲಕ್ಕೆ ವಿಮಾನ ನಿಲ್ದಾಣ ಅಧಿಕಾರಿಗಳು ಕೂಡ ಶಾಮೀಲಾಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.





