ಕಲಬುರ್ಗಿ: ಇಲ್ಲಿ ಆಯೋಜಿಸಿದ್ದ ಕಲಬುರ್ಗಿ ಪಥ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿಗೆ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಖರ್ಗೆ ಅವರು, ಡಿಕೆಶಿ ಹಾಗೂ ಸಿದ್ದರಾಮಯ್ಯ ಇಬ್ಬರೂ ಸೇರಿದರೆ ನಮ್ಮ ಭಾಗದಲ್ಲಿ ಕೆಲಸ ಆಗುತ್ತದೆ. ಹೀಗಾಗಿ ಎಲ್ಲರೂ ಜೊತೆಗೆ ಹೋಗಬೇಕು. ಬೇರೆ ಬೇರೆ ದಿಕ್ಕಿನಲ್ಲಿ ಹೋಗಬಾರದು ಎಂದು ಕೈ ಸನ್ನೆ ಮಾಡಿ ಹೇಳಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಕೇಂದ್ರದಿಂದ ನಮಗೆ ಅನ್ಯಾಯ ಆಗುತ್ತಿದೆ. ಕೇಂದ್ರದಿಂದ ಬರಬೇಕಾದ ಅನುದಾನ ಬರುತ್ತಿಲ್ಲ. ನರೇಗಾ ಯೋಜನೆಯಲ್ಲಿ ನಮಗೆ ದುಡ್ಡು ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಮಲ್ಲಿಕಾರ್ಜುನ ಖರ್ಗೆ ಅವರು, ಮೋದಿ 11 ವರ್ಷಗಳಲ್ಲಿ 11 ಸುಳ್ಳುಗಳನ್ನು ಹೇಳಿದ್ದಾರೆ ಎಂದು ಪಟ್ಟಿ ಹೇಳಿದರು.





