Mysore
23
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಡೆಂಗ್ಯೂ ಪರೀಕ್ಷೆಯನ್ನು ಸರ್ಕಾರದಿಂದಲೇ ಮಾಡಿಸಿ: ಆರ್‌.ಅಶೋಕ ಆಗ್ರಹ

ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಹೆಚ್ಚಾಗುತ್ತಿದೆ. ಝೀಕಾ, ಕಾಲರಾದಿಂದಲೂ ಕನ ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಕೂಡಲೇ ಸರ್ಕಾರ ಡೆಂಘೀ ತುರ್ತು ಪರಿಸ್ಥಿತಿ ಘೋಷಿಸಿ, ಜನರಿಗೆ ಉಚಿತವಾಗಿ ಸರ್ಕಾರದಿಂದಲೇ ಪರೀಕ್ಷೆ ಮಾಡಿಸಬೇಕು ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಆಗ್ರಹಿಸಿದರು.

ರಾಜ್ಯದಲ್ಲಿ ಹಾಗೂ ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಜಯನಗರ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಡೆಂಗ್ಯೂ ರೋಗಿಗಳನ್ನು ಭೇಟಿ ಮಾಡಿ, ಯೋಗಕ್ಷೇಮ ವಿಚಾರಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡೆಂಗ್ಯೂ ರೋಗ ಹೀಗೆ ಹರಡುವಾಗ ಸರ್ಕಾರ ಪ್ರತಿ ತಾಲೂಕಲ್ಲಿ ಟಾಸ್ಕ್‌ ಫೋರ್ಸ್‌ ರಚಿಸಿ ಔಷಧಿ ಪೂರೈಸುವ, ರೋಗ ನಿಯಂತ್ರಿಸುವ ಕ್ರಮಗಳನ್ನು ವಹಿಸಬೇಕಿತ್ತು. ಇವ್ಯಾವುದನ್ನೂ ಸರ್ಕಾರ ಮಾಡಿಲ್ಲ. ರಾಜ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಜನರು ಡೆಂಗ್ಯೂಗೆ ಒಳಗಾಗಿದ್ದಾರೆ. ಇವರಿಗೆ ಪರೀಕ್ಷೆ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಒತ್ತಾಯಿಸಿದರು.

ತೈಲ ದರ ಏರಿಕೆ ಸೇರಿದಂತೆ ವಿವಿಧ ತೆರಿಗೆಗಳನ್ನು ಸರ್ಕಾರ ಹಾಕಿರುವಾಗ ಜನರಿಗೆ ಉಚಿತ ಪರೀಕ್ಷೆ ಮಾಡಿಸಲು ಸಾಧ್ಯವಿಲ್ಲವೇ? ಉಚಿತ ಪರೀಕ್ಷೆ ಮಾಡಿದರೆ ಸುಮಾರು 10 ಕೋಟಿ ರೂ. ಖರ್ಚಾಗಬಹುದು. ಅಷ್ಟು ಹಣವನ್ನು ಮಂಜೂರು ಮಾಡಲು ಸಾಧ್ಯವೇ ಇಲ್ಲವೇ? ಅದಕ್ಕೂ ತೆರಿಗೆ ಹಾಕಬೇಕೆ? ಕೆಲ ಆರೋಗ್ಯ ಕೇಂದ್ರಗಳು 1,000 ರೂ.ವರೆಗೂ ಪರೀಕ್ಷಾ ಶುಲ್ಕ ವಿಧಿಸುತ್ತಿವೆ. ಆದ್ದರಿಂದ ಸರ್ಕಾರ ಕೂಡಲೇ ವೆಚ್ಚವನ್ನು ಭರಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಡೆಂಘೀ ರೋಗ ವೇಗವಾಗಿ ಹರಡುತ್ತಿದ್ದು, ಪ್ರತಿ ದಿನ ಮೂರರಿಂದ ನಾಲ್ಕು ಜನರು ಸಾವಿಗೀಡಾಗುತ್ತಿದ್ದಾರೆ. ಬೆಂಗಳೂರು ಸೇರಿದಂತೆ ಎಲ್ಲ ಭಾಗಗಳಲ್ಲಿ ಜನರು ಭಯಕ್ಕೊಳಗಾದರೂ ಸರ್ಕಾರಕ್ಕೆ ಇದರ ಭಯ ಬಂದಿಲ್ಲ. 100 ಮಾದರಿ ಪರೀಕ್ಷೆ ಮಾಡಿದರೆ 13-14 ರಲ್ಲಿ ಡೆಂಗ್ಯೂ ಲಕ್ಷಣ ಕಂಡುಬರುತ್ತಿದೆ. ಬೇರೆ ರೋಗಗಳಿರುವ ವ್ಯಕ್ತಿಗಳಿಗೆ ಡೆಂಗ್ಯೂ ಬಂದರೆ ಸಾವಿನ ಸಾಧ್ಯತೆ ಹೆಚ್ಚಿರುತ್ತದೆ. ಎಲ್ಲೆಡೆ ಕಸದ ರಾಶಿ ಇದೆ, ಮಳೆಯಿಂದಾಗಿ ಅಲ್ಲಲ್ಲಿ ನೀರು ಸಂಗ್ರಹವಾಗುತ್ತಿದೆ. ಆದರೂ ಸರ್ಕಾರ ಏನೂ ಕ್ರಮ ವಹಿಸಿಲ್ಲ ಎಂದು ದೂರಿದರು.

ಅತಿ ಸಣ್ಣ ವಯಸ್ಸಿನ ಮಕ್ಕಳಿಗೂ ಡೆಂಗ್ಯೂ ರೋಗ ಬರುತ್ತಿದೆ. ಅಧಿಕಾರಿಗಳು ಕೊಠಡಿ ಬಿಟ್ಟು ಹೊರಗೆ ಬರುತ್ತಿಲ್ಲ. ಸರ್ಕಾರ ಡೆಂಘೀ ತುರ್ತು ಪರಿಸ್ಥಿತಿ ಘೋಷಣೆ ಮಾಡಿದರೆ ಮಾತ್ರ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯ. ಬೆಂಗಳೂರು ಸೇರಿದಂತೆ ಅನೇಕ ಕಡೆ ಕಸದ ರಾಶಿ ಬಿದ್ದಿದೆ. ಅದನ್ನು ಸ್ವಚ್ಛ ಮಾಡಲು ಸರ್ಕಾರ ಗಮನಹರಿಸಬೇಕು. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕರನ್ನು ಬಳಸಿಕೊಂಡು ಮನೆ ಮನೆಗೆ ಹೋಗಿ ಪರೀಕ್ಷೆ ಮಾಡಬೇಕು. ಪ್ರತಿ ಆಸ್ಪತ್ರೆಯಲ್ಲಿ ಡೆಂಘೀಗೆ ಒಂದು ವಾರ್ಡ್‌ ಮೀಸಲಿಡಬೇಕು ಎಂದು ಒತ್ತಾಯಿಸಿದರು.

Tags: