Mysore
24
scattered clouds

Social Media

ಭಾನುವಾರ, 29 ಡಿಸೆಂಬರ್ 2024
Light
Dark

ಬಸವಣ್ಣನ ಪಠ್ಯ ಮತ್ತೆ ಪರಿಷ್ಕರಣೆ ವಿಚಾರ: ಸಿಎಂಗೆ ಪತ್ರ ಬರೆದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ

ಬೆಂಗಳೂರು: 2016ರ ಬಳಿಕ ಮೂರನೇ ಬಾರಿಗೆ 9ನೇ ತರಗತಿ ಸಮಾಜವಿಜ್ಞಾನ ಪಠ್ಯದಲ್ಲಿ ಬಸವಣ್ಣನ ಪರಿಚಯವನ್ನು ಮತ್ತೆ ಪರಿಷ್ಕರಣೆ ಮಾಡಲಾಗುತ್ತಿದೆ.

ಈ ಪಠ್ಯ ಪರಿಷ್ಕರಣೆಗೆ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಬೇಸರ ವ್ಯಕ್ತಪಡಿಸಿದ್ದು, ಈ ಕುರಿತು ಸಿಎಂ ಸಿದ್ದರಾಮಯ್ಯಗೆ ಸಂಸ್ಥೆಯ ಪರವಾಗಿ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಪತ್ರ ಬರೆದಿದ್ದಾರೆ.

ಪಠ್ಯ ಪರಿಷ್ಕರಣೆ ಮಾಡುವಾಗ ವೀರಶೈವ ಪದವನ್ನು ಕೈಬಿಡಲಾಗಿದೆ. ಇದು ಸರಿಯಲ್ಲ ಎಂದು ವಚನದ ಮೂಲಕ ಸಂಸ್ಥೆ ವಿವರಣೆ ನೀಡಿದೆ. ಬಸವಣ್ಣ ಅರಿವನ್ನೇ ಗುರುವಾಗಿಸಿಕೊಂಡಿದ್ದರು. ಪಠ್ಯದ ದೋಷ ಸರಿಪಡಿಸಿದ್ದರೆ ಕಾನೂನು ಹೋರಾಟ ಮಾಡುವುದಾಗಿ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ಈ ವರ್ಷ ಪರಿಷ್ಕರಣೆಗೊಂಡಿರುವ ಪುಸ್ತಕದಲ್ಲಿ ವೀರಶೈವ ಪದವನ್ನು ತೆಗೆದು ಹಾಕಲಾಗಿದೆ. ಇದು ಸರಿಯಾದ ಪರಿಷ್ಕರಣೆಯಲ್ಲ. ಏಕೆಂದರೆ ಕರ್ನಾಟಕ ಸರ್ಕಾರವು ಪ್ರಸಿದ್ಧ ಸಂಶೋಧಕರಾಗಿದ್ದ ಡಾ.ಎಂ.ಎಂ ಕಲಬುರಗಿಯವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟಿಸಿರುವ ಸಮಗ್ರ ವಚನ ಸಂಪುಟಗಳಲ್ಲಿ ಪ್ರಕಟವಾದ ವಚನಗಳನ್ನು ಒಮ್ಮೆ ಕೂಲಂಕುಶವಾಗಿ ಪರಿಶೀಲಿಸಿ ನೋಡಿದಾಗ ಬಸವಣ್ಣನವರಾದಿಯಾಗಿ 30 ಜನ ಶಿವಶರಣರು ತಮ್ಮ 142 ವಚನಗಳಲ್ಲಿ 221 ಬಾರಿ ವೀರಶೈವ ಪದವನ್ನು ಬಳಸಿದ್ದಾರೆ. ಕೇವಲ 8 ಜನ ಶಿವಶರಣರು ತಮ್ಮ 10 ವಚನಗಳಲ್ಲಿ ಕೇವಲ 12 ಕಡೆ ಮಾತ್ರ ಲಿಂಗಾಯತ ಪದವನ್ನು ಬಳಸಿದ್ದಾರೆ. ಆದರೆ ಬಸವಣ್ಣನವರು ತಮ್ಮ ಒಂದು ವಚನದಲ್ಲಿಯೂ ಲಿಂಗಾಯತ ಪದ ಬಳಸಿಲ್ಲ.

ಈ ವರ್ಷ ಪರಿಷ್ಕೃತಗೊಂಡಿರುವ ಪುಸ್ತಕದಲ್ಲಿ ಬಸವಣ್ಣನವರು ಅರಿವನ್ನೇ ಗುರುವಾಗಿಸಿಕೊಂಡಿದ್ದರು. ಬಸವಣ್ಣನವರು ಇಷ್ಟಲಿಂಗದ ವಿನೂತನ ಪರಿಕಲ್ಪನೆಯನ್ನು ಜಾರಿಗೆ ತಂದರು ಎಂದು ಪ್ರಕಟಿಸಲಾಗಿದೆ. ಇದು ಸಂಪೂರ್ಣ ತಪ್ಪು ಮಾಹಿತಿಯಾಗಿದೆ. ಬಸವಣ್ಣನವರು ತಮ್ಮ ವಚನಗಳಲ್ಲಿ ಪ್ರತಿಯೊಬ್ಬರಲ್ಲಿರುವ ಅಂತರಂಗದಲ್ಲಿರುವ ಪರಮಾತ್ಮನ ಅರಿವೇ ಗುರುವಾಗಬೇಕು. ಅರಿವು ಪ್ರತಿಯೊಬ್ಬರ ಬದುಕಿಗೆ ನಿತ್ಯ ದಾರದೀಪವಾಗಬೇಕೆಂದು ಪ್ರತಿಪಾದಿಸಿದ್ದಾರೆಯೇ ಹೊರತು ತಮಗೆ ಗುರುವಿಲ್ಲ ತಮಗೆ ತಮ್ಮ ಅರಿವೇ ಗುರು ಎಂದು ಎಲ್ಲಿಯೂ ಯಾವ ಸಂದರ್ಭದಲ್ಲಿಯೂ ಹೇಳಿಲ್ಲ ಎಂದಿದ್ದಾರೆ.

ಆದ್ದರಿಂದ ಶಿಕ್ಷನ ಇಲಾಖೆ ಪಠ್ಯ ಪುಸ್ತಕ ಪರಿಷ್ಕರಣೆ ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯರಿಗೆ ಡಾ.ಮಹಾಂತಲಿಂಗ ಶಿಚಾವಾರ್ಯ ಸ್ವಾಮೀಜಿ ಪತ್ರ ಬರೆದು ಆಗ್ರಹಿಸಿದ್ದಾರೆ.

 

Tags: