ವಿಜಯಪುರ: ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ ಈ ಬಾರಿಯ ರಾಜ್ಯ ಬಜೆಟ್ ಎಲ್ಲಾ ಸಮುದಾಯಗಳಿಗೂ ಪೂರಕವಾಗಿದೆ ಎಂದು ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಇಂದು(ಮಾರ್ಚ್.8) ರಾಜ್ಯ ಬಜೆಟ್ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಸಿದ್ದರಾಮಯ್ಯ 2025-26ನೇ ಸಾಲಿನ ಬಜೆಟ್‌ನಲ್ಲಿ ಹಿಂದುಳಿದವರು ಮತ್ತು ದಲಿತರಿಗೆ ಅನುದಾನ ನೀಡಿದ್ದೇವೆ. ಅಂತೆಯೇ ಮುಸಲ್ಮಾನರಿಗೂ ಮೀಸಲು ಅನುದಾನ ನೀಡಲಾಗಿದೆ. ಆದರೆ ಈ ಬಾರಿಯ ಬಜೆಟ್ ಅನ್ನು ಮುಸಲ್ಮಾನರ ಬಜೆಟ್ ಎಂದು ಆರೋಪ ಮಾಡುವವರ ಕಣ್ಣು ಹಳದಿಯಾಗಿದೆ ಎಂದು ತಿರುಗೇಟು ನೀಡಿದ್ದಾರೆ.
ವಿರೋಧ ಪಕ್ಷಗಳಿಗೆ ಯಾವಾಗಲೂ ಮುಸಲ್ಮಾನರ ಸಮುದಾಯ ಯಾಕೆ ಕಾಣುತ್ತದೆ ಎಂಬುದು ತಿಳಿದಿಲ್ಲ. ಆದರೆ ಬಿಜೆಪಿ ಅಧಿಕಾರದಲ್ಲಿದ್ದ ನಾಲ್ಕು ವರ್ಷ ಏನು ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಸಚಿವ ಪ್ರಿಯಾಂಕ್ ಖರ್ಗೆ ಸರಿಯಾಗಿಯೇ ಹೇಳಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಬಿಜೆಪಿ ಶಾಸಕ ಯತ್ನಾಳ್ ಅವರು ಹಲಾಲ್ ಬಜೆಟ್ ಎಂದು ನೀಡಿರುವ ಹೇಳಿಕೆ ಬಗ್ಗೆ ಮಾತನಾಡಿದ ಅವರು, ಹಲಾಲ್ ಬಜೆಟ್ ಎಂದು ಹೇಳಿರುವವರೇ ಹಲಾಲ್ ತಿನ್ನುತ್ತಿರುತ್ತಾರೆ ಎಂದು ವ್ಯಂಗ್ಯ ಮಾಡಿದ್ದಾರೆ.





