ವಿಜಯಪುರ: ನಮ್ಮ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ನಡೆಯೋಲ್ಲ ಅಂದರೆ ಪ್ರಧಾನಿ ಮೋದಿ ಅವರು ಯಾಕೆ ಕಾಪಿ ಮಾಡಬೇಕು ಎಂದು ಸಚಿವ ಎಂ.ಬಿ.ಪಾಟೀಲ್ ಪ್ರಶ್ನಿಸಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಇಂದು(ಫೆಬ್ರವರಿ.19) ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಗಳಿಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ರಾಜ್ಯ ಸರ್ಕಾರದ ಗ್ಯಾರಂಟಿಗಳನ್ನೇ ಪ್ರಧಾನಿ ಮೋದಿ ಅವರಿ ಕಾಪಿ ಮಾಡುತ್ತಿದ್ದಾರೆ. ನಮ್ಮ ಗ್ಯಾರಂಟಿ ನಡೆಯಲ್ಲ ಅಂದರೆ ಅವರು ಯಾಕೆ ಕಾಪಿ ಮಾಡುತ್ತಿದ್ದಾರೆ? ಮಹಿಳೆಯರು ಮತ್ತು ಬಡವರನ್ನು ಸಶಕ್ತರನ್ನಾಗಿ ಮಾಡಲು ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಅವುಗಳು ಮುಂದುವರೆಯಲಿದ್ದು, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಹ ಆಗಲಿವೆ ಎಂದು ತೀರುಗೇಟು ನೀಡಿದ್ದಾರೆ.
ಇದೇ ವೇಳೆ ಕೆಲ ತಿಂಗಳಿನಿಂದ ಗೃಹಲಕ್ಷ್ಮೀ ಹಣ ಪಾವತಿಯಾಗಿಲ್ಲ ಎಂಬ ಬಗ್ಗೆ ಮಾತನಾಡಿದ ಅವರು, ಈ ಕುರಿತು ಚರ್ಚೆ ಮಾಡಲಾಗುತ್ತಿದೆ. ಗೃಹಲಕ್ಷ್ಕೀ ಯೋಜನೆಯನ್ನು ಉಳ್ಳವರು ತೆಗೆದುಕೊಳ್ಳಬಾರದು, ಬಡವರಿಗೆ ಹೋಗಬೇಕು. ಬಡವರು ಉಳಿದರೆ ಅವರಿಗೂ ಸಿಗಬೇಕೆಂದು ಶ್ರೀಮಂತರು ಹಾಗೂ ಉಳ್ಳವರು ತಾವೇ ಬಿಟ್ಟು ಕೊಡಬೇಕು. ಇಲ್ಲವಾದರೆ ಸರ್ಕಾರ ಶ್ರೀಮಂತರನ್ನು ಗೃಹಲಕ್ಷ್ಮೀ ಯೋಜನೆಯಿಂದ ತೆಗೆದು ಹಾಕುತ್ತದೆ ಎಂದು ಹೇಳಿದರು.




