ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ನಿರೀಕ್ಷೆಯಂತೆ ಲಭಿಸದ ಫಲಿತಾಂಶ, ರಾಜ್ಯದಲ್ಲಿ ಕಡಿಮೆ ಸ್ಥಾನ, ಪರಿಶಿಷ್ಟ ನಿಗಮದ ಹಗರಣ ಆರೋಪ ಹಿನ್ನೆಲೆ ಸಚಿವರ ಜೊತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಭೆ ನಡೆಸಿ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರಗಳ ಉಸ್ತುವಾರಿ ಹೊತ್ತ ಸಚಿವರು ಕ್ಷೇತ್ರದಲ್ಲಿ ಕಡಿಮೆ ಮತಗಳಿಸಿ ಸೋತಿದಕ್ಕೆ ರಾಹುಲ್ ಗಾಂಧಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೀವು ಹೇಳಿದವರಿಗೆ ಟಿಕೆಟ್ ನೀಡಿದ್ದೇವೆ. ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಿಮ್ಮ ಮೇಲಿತ್ತು. ಆದರೆ ಗೆಲ್ಲಿಸುವಲ್ಲಿ ವಿಫಲರಾಗಿದ್ದೀರಿ. ಕೊಟ್ಟ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸುವಲ್ಲಿ ವಿಫಲರಾದವರ ಮೇಲೆ ಯಾವ ಕ್ರಮ ಕೈಗೊಳ್ಳಬೇಕು. ಮುಂದೆ ಹೀಗಾಗದಂತೆ ನೋಡಿಕೊಳ್ಳಿ ಎಂದು ಸಚಿವರಿಗೆ ರಾಹುಲ್ ಗಾಂಧಿ ಅವರು ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಸಚಿವರು ಸರ್ಕಾರಕ್ಕೆ ಧಕ್ಕೆ ಅಥವಾ ಮುಜುಗರ ಬರುವಂತ ಕೆಲಸ ಮಾಡಬಾರದು. ಸರ್ಕಾರದ ವರ್ಚಸ್ಸಿಗೆ ಧಕ್ಕೆ ತಂದು ಇಕ್ಕಟ್ಟಿಗೆ ಸಿಲುಕಿಸಬಾರದು. ಜೊತೆಗೆ ವಿರೋಧ ಪಕ್ಷಗಳ ವಾಗ್ದಾಳಿಗೆ ಸಿಲುಕದಂತೆ ಕೆಲಸ ಮಾಡಿ ಎಂದು ಎಲ್ಲಾ ಸಚಿವರಿಗೆ ಅವರು ಸೂಚಿಸಿದ್ದಾರೆ.





