Mysore
20
overcast clouds
Light
Dark

ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಆಮಿಷ ಪ್ರಕರಣದಲ್ಲಿ ಡಿಕೆಶಿಗೆ ರಿಲೀಫ್

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಣಕ್ಕಿಳಿದಿರುವ ಕಾಂಗ್ರೆಸ್‌ ಅಭ್ಯರ್ಥಿ ತಮ್ಮ ಸೋದರ ಡಿಕೆ ಸುರೇಶ್‌ ಪರ ಮತಪ್ರಚಾರ ಮಾಡುವ ವೇಳೆ ಅಪಾರ್ಟ್‌ಮೆಂಟ್‌ ಒಂದರ ಜನರ ಜತೆ ಸಭೆ ನಡೆಸಿ ಮಾತನಾಡಿದ್ದ ಡಿಕೆಶಿ ತನ್ನ ಸಹೋದರನಿಗೆ ಮತ ಹಾಕಿದರೆ ನಿಮ್ಮ ಕುಡಿಯುವ ನೀರಿನ ಬೇಡಿಕೆಯನ್ನು ಈಡೇರಿಸುವುದಾಗಿ ಹೇಳಿದ್ದರು ಎಂದು ಬಿಜೆಪಿ ದೂರು ದಾಖಲಿಸಿತ್ತು.

ಈ ಕುರಿತಾಗಿ ಇದೀಗ ಹೈಕೋರ್ಟ್‌ ಆದೇಶ ನೀಡಿದ್ದು, ಡಿಕೆ ಶಿವಕುಮಾರ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಸೂಚನೆ ನೀಡಿದೆ. ಚುನಾವಣೆ ಭಾಷಣವನ್ನು ಆಮಿಷವೆಂದು ಆರೋಪಿಸಲಾಗಿದ್ದ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಪರ ಹಿರಿಯ ವಕೀಲ ಉದಯ್ ಹೊಳ್ಳ ವಾದ ಮಾಡಿದರು.

ಇನ್ನು ಡಿಕೆ ಶಿವಕುಮಾರ್‌ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದ ವಕೀಲ ಶರತ್‌ ದೊಡ್ಡವಾಡ್‌ ಡಿಕೆಶಿ ಮತದಾರರಿಗೆ ಆಮಿಷ ಒಡ್ಡಿದ್ದಾರೆ ಎಂದು ವಾದ ಮಂಡಿಸಿದರು. ಇದನ್ನಾಲಿಸಿದ ಹೈಕೋರ್ಟ್ ಚುನಾವಣೆ ಪ್ರಚಾರದ ಗುಣಮಟ್ಟ ಕುಸಿತಕ್ಕೆ ಕಳವಳ ವ್ಯಕ್ತಪಡಿಸಿತು.

ಭಾಷಣದ ವೇಳೆ ಇದು ಪುನರಾವರ್ತನೆಯಾಗದಂತೆ ಎಚ್ಚರಿಸಿ ಎಂದು ಡಿಕೆಶಿ ಪರ ಹಿರಿಯ ವಕೀಲ ಉದಯ್ ಹೊಳ್ಳರಿಗೆ ಕೋರ್ಟ್ ಸೂಚನೆ ನೀಡಿತು. ಅಲ್ಲದೇ ಮುಂದಿನ ವಿಚಾರಣೆವರೆಗೂ ಬಲವಂತದ ಕ್ರಮ ಕೈಗೊಳ್ಳದಂತೆ ಸೂಚನೆಯನ್ನೂ ಸಹ ನ್ಯಾ.ಕೃಷ್ಣ ಎಸ್ ದೀಕ್ಷಿತ್ ಇದ್ದ ಪೀಠ ಇದೇ ವೇಳೆ ನೀಡಿತು.