ಬೆಂಗಳೂರು: ರಾಜ್ಯಪಾಲರು ದೂರುಗಳ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಸೂಚಿಸಿ ಲೋಕಾಯುಕ್ತಕ್ಕೆ ವಾಪಸ್ ಕಳುಹಿಸಲಿದ್ದು, ಲೋಕಾಯುಕ್ತದವರು ಸ್ಪಷ್ಟೀಕರಣ ನೀಡಲಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಲೋಕಾಯುಕ್ತದಿಂದ ದೂರುಗಳ ಕಡತ ಹೋಗಿದೆ. ಇದಾದ ನಂತರ ಕ್ಲಾರಿಫಿಕೇಶನ್ ಕೇಳಿ ವಾಪಸ್ ಕಳುಹಿಸಿದ್ದೇವೆ ಎಂದು ರಾಜ್ಯಪಾಲರು ಹೇಳುತ್ತಿದ್ದಾರೆ. ಲೋಕಾಯುಕ್ತದಿಂದ ಸ್ಪಷ್ಟೀಕರಣ ಬರುವವರೆಗೂ ವಿಷಯ ರೆಜೆಕ್ಟ್ ಆಗುವುದಿಲ್ಲ ಎಂದರು.
ಇನ್ನು ರಾಜ್ಯಪಾಲರ ಕಚೇರಿಯಿಂದ ಮೂರು ದೂರುಗಳ ಕುರಿತು ಕ್ಲಾರಿಫಿಕೇಶನ್ ಕೇಳಿದ್ದಾರೆ ಎಂದಾದರೆ ಲೋಕಾಯುಕ್ತದವರು ಸುಮ್ಮನೆ ಇರಲು ಬಯಸುವುದಿಲ್ಲ. ಸ್ಪಷ್ಟೀಕರಣ ನೀಡಬೇಕಾಗುತ್ತದೆ. ತದನಂತರದ ವಿಚಾರ ರಾಜ್ಯಪಾಲರಿಗೆ ಬಿಟ್ಟದ್ದು ಎಂದು ಹೇಳಿದರು.
ಇನ್ನು ಮುಡಾ ವಿಚಾರದಿಂದ ಸಿಎಂ ಸಿದ್ದರಾಮಯ್ಯ ಆತಂಕಗೊಂಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಿಎಂ ಯಾವುದೇ ಆತಂಕದಲ್ಲಿಲ್ಲ. ಎಲ್ಲಾ ವಿಚಾರದಲ್ಲೂ ಸ್ಪಷ್ಟವಾಗಿದ್ದಾರೆ. ಸಿಎಂ ಆಗಿ ಅವರು ಅಧಿಕಾರ ದುರುಪಯೋಗಪಡಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.