Mysore
19
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಲೋಕಾಯುಕ್ತ ಪೊಲೀಸರಿಂದ ಮುಡಾ ಹಗರಣ ಮುಚ್ಚಿಹಾಕುವ ಪ್ರಯತ್ನ: ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಕಿಡಿ

ಬೆಂಗಳೂರು: ಮುಡಾ ಹಗರಣದಲ್ಲಿ ಜಾರಿ ನಿರ್ದೇಶನಾಲಯ ಆಸ್ತಿಗಳನ್ನು ವಶಪಡಿಸಿಕೊಂಡಿದ್ದರೂ, ಲೋಕಾಯುಕ್ತ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಪ್ರಕರಣ ಮುಚ್ಚಿಹಾಕಲು ಲೋಕಾಯುಕ್ತ ಪೊಲೀಸರು ಪ್ರಯತ್ನ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರದ ಮುಡಾ ಹಗರಣ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ವಿರುದ್ಧ ಬಿಜೆಪಿ ತೀವ್ರ ಹೋರಾಟ ಮಾಡಿದೆ.

ಮುಡಾ ಹಗರಣದಲ್ಲಿ 4-5 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ. ಸಿಎಂ ಸಿದ್ದರಾಮಯ್ಯ 14 ಸೈಟು ವಾಪಸ್‌ ನೀಡಿರುವುದರಿಂದ ತಪ್ಪಾಗಿದೆ ಎಂಬುದು ಸಾಬೀತಾಗಿದೆ. ಜಾರಿ ನಿರ್ದೇಶನಾಲಯ ಆಸ್ತಿಗಳನ್ನು ವಶಕ್ಕೆ ಪಡೆದಿದ್ದರೂ, ಲೋಕಾಯುಕ್ತ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಆದ್ದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಲಾಗಿದೆ. ಇದರಲ್ಲಿ ಅಧಿಕಾರಿಗಳ ತಪ್ಪು ಎನ್ನಲಾಗುತ್ತಿದೆ. ಆದರೆ ಇದರ ಹಿಂದೆ ಸಿಎಂ ಸಿದ್ದರಾಮಯ್ಯ ಇರುವುದನ್ನು ಮುಚ್ಚಿಹಾಕಲಾಗುತ್ತಿದೆ. ಇದರ ವಿರುದ್ಧ ಬಿಜೆಪಿ ಹೋರಾಟ ಮುಂದುವರಿಸಲಿದೆ ಎಂದರು.

ಲೋಕಾಯುಕ್ತ ಪೊಲೀಸರು ರಾಜ್ಯ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುತ್ತಾರೆ. ಪೊಲೀಸರಿಗೂ ವರ್ಗಾವಣೆ, ಬಡ್ತಿ ಬೇಕಿರುತ್ತದೆ. ಆದ್ದರಿಂದ ಈ ರೀತಿ ತನಿಖೆ ನಡೆಯುತ್ತಿದೆ. ಪೊಲೀಸರು ವರದಿ ನೀಡಿದರೂ ಅದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ಲೀನ್‌ ಚಿಟ್‌ ನೀಡುವುದು ಖಚಿತ ಎಂದರು.

ಈ ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಮಾತ್ರ ನಿಜಾಂಶ ಹೊರಬರಲಿದೆ. ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಎಸ್‌ಐಟಿ ಕ್ಲೀನ್‌ ಚಿಟ್‌ ನೀಡಿರುವಾಗ ಮುಖ್ಯಮಂತ್ರಿಗೆ ಕ್ಲೀನ್‌ ಚಿಟ್‌ ನೀಡುವುದು ಖಚಿತ. ಆದ್ದರಿಂದ ಹೋರಾಟವನ್ನು ಮತ್ತೆ ಆರಂಭಿಸುತ್ತೇವೆ. ತನಿಖೆಯನ್ನು ಸಿಬಿಐಗೆ ವಹಿಸುವವರೆಗೂ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

Tags:
error: Content is protected !!