ಬೆಂಗಳೂರು: ಹಳೇ ಮೈಸೂರು ಭಾಗದಲ್ಲಿ ಲೋಕಸಭಾ ಚುನಾವಣೆಯ ಸೋಲಿನ ಬಗ್ಗೆ ಆತ್ಮವಲೋಕನ ಮಾಡಲು ಸಿಎಂ ಸಿದ್ದರಾಮಯ್ಯು ಸಭೆ ಕರೆದಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಶನಿವಾರ (ಜೂನ್ ೮) ಮೈಸೂರಿಗೆ ಆಗಮಿಸಿ ರಾತ್ರಿ ವಾಸ್ತವ್ಯ ಹೂಡಿ ಚುನಾವಣಾ ಫಲಿತಾಂಶದ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಜೊತೆಗೆ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಮುನ್ನಡೆ ಮತ್ತು ಕಾರ್ಯಕ್ಷಮತೆಯನ್ನು ಗಮನಿಸಿ, ಪಕ್ಷದ ಕಳಪೆ ಪ್ರದರ್ಶನಕ್ಕೆ ಕಾರಣವನ್ನು ವಿಶ್ಲೇಷಿಸಲಿದ್ದಾರೆ.
ಹಾಸನ ಮತ್ತು ಚಾಮರಾಜನಗರ ಕ್ಷೇತ್ರಗಳನ್ನು ಹೊರತುಪಡಿಸಿ, ಹಳೇ ಮೈಸೂರು ಭಾಗದ ಎಲ್ಲಾ ಸಚಿವರು, ಶಾಸಕರು ಮತ್ತು ಇತರ ಹಿರಿಯ ಮುಖಂಡರನ್ನು ಭೇಟಿ ಮಾಡೊ ಎಲ್ಲಿ ತಪ್ಪಾಗಿದೆ ಎಂದು ಅರಿಯಲು ಸಿಎಂ ಸಿದ್ದರಾಮಯ್ಯ ಈ ಸಭೆ ಕರೆದಿದ್ದಾರೆ. ಸ್ವತಃ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಇಬ್ಬರ ತವರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವೂ ಒಂದು ಸ್ಥಾನವನ್ನು ಗೆಲ್ಲಲು ವಿಫಲವಾಗಿದೆ. ಈ ಬಗ್ಗೆಯೂ ಎಡವಿದೆಲ್ಲಿ ಎಂದು ಆತ್ಮವಲೋಕನದ ಬಗ್ಗೆ ಚರ್ಚಿಸಲಿದ್ದಾರೆ.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಾಂಗ್ರೆಸ್‍ನ ಎಂ.ಲಕ್ಷ್ಮಣ ವಿರುದ್ಧ 1,39,262 ಮತಗಳ ಅಂತರದಿಂದ ಗೆಲುವು ಸಾಧಿಸಿದರೆ, ಎನ್‍ಡಿಎ ಅಭ್ಯರ್ಥಿಯಾಗಿದ್ದ ರಾಜ್ಯ ಜೆಡಿಎಸ್ ಮುಖ್ಯಸ್ಥ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್‍ನ ವೆಂಕಟ್ರಮಣೇಗೌಡ (ಸ್ಟಾರ್ ಚಂದ್ರು) ಅವರನ್ನು ಸೋಲಿಸಿದರು. ಮಂಡ್ಯದಲ್ಲಿ ಕುಮಾರಸ್ವಾಮಿ 2,84,620 ಮತಗಳ ಅಂತರದಿಂದ ಭರ್ಜರಿ ಜಯ ಗಳಿಸಿದ್ದಾರೆ.
ರಾಜ್ಯಸಭೆ, ಪರಿಷತ್ತಿನಲ್ಲಿ ಪಕ್ಷವು ಸಮುದಾಯಕ್ಕೆ ಅವಕಾಶ ನೀಡಲಾಗಿತ್ತು. ಲೋಕಸಭೆ ಚುನಾವಣೆಯಲ್ಲಿ ಒಕ್ಕಲಿಗರನ್ನು ಕಣಕ್ಕಿಳಿಸಲಾಗಿದ್ದರೂ ಎಲ್ಲಿ ಹಿನ್ನಡೆಯಾಯಿತು ಎಂಬ ಬಗ್ಗೆ ಸಿದ್ದರಾಮಯ್ಯ ತಮ್ಮ ನಿಷ್ಠಾವಂತ ಬೆಂಬಲಿಗರೊಂದಿಗೆ ಈಗಾಗಲೇ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.