ಮೈಸೂರು: ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲಾಗುವುದು ಎಂದು ರಾಜ್ಯ ಸರ್ಕಾರ ಮಹತ್ವದ ಘೋಷಣೆ ಮಾಡಿದೆ.
ಇದೇ ಜೂನ್ 4ರಂದು ಲೋಕಸಭಾ ಚುನಾವಣಾ ಫಲಿತಾಂಶ ಬಳಿಕ ಕಳೆದ ಮೂರು ವರ್ಷಗಳಿಂದ ಚುನಾವಣೆ ನಡೆಯದೇ ಇದ್ದ ಎಲ್ಲಾ ತಾಲೂಕು, ಜಿಲ್ಲಾ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ.
ನಗರದ ಮೈಲಾರಿ ಹೋಟೆಲ್‌ನಲ್ಲಿ ತಿಂಡಿ ಸವಿದು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸದೇ ಹೋದರೇ, ಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ, ಲೋಕಸಭಾ ಚುನಾವಣೆ ಫಲಿತಾಂಶ ಬಳಿಕ ಇವುಗಳಿಗೆ ಚುನಾವಣೆ ನಡೆಸಲಾಗುವುದು ಎಂದು ತಿಳಿಸಿದರು.
ಚುನಾವಣಾ ಫಲಿತಾಂಶದ ಬಳಿಕ ಜಿಲ್ಲಾ ಹಾಗೂ ತಾಲೂಕು ಪಂಚಾಯತ್‌ಗಳಿಗೆ ಚುನಾವಣೆ ನಡೆಸಲಾಗುವುದು. ಡಿಲಿಮಿಟೇಶನ್ ಪ್ರಕ್ರಿಯೆ ಮುಗಿದ ಬಳಿಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೂ ಚುನಾವಣೆ ನಡೆಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಮಹತ್ವದ ಘೋಷಣೆ ಮಾಡಿದ್ದಾರೆ.
ಮೀಸಲು, ತಾಂತ್ರಿಕ ಮತ್ತು ಕಾನೂನಾತ್ಮಕ ನೆಪವೊಡ್ಡಿ ಸ್ಥಳೀಯ ಚುನಾವಣೆ ನಡೆಸಲು ಕಳೆದ ಮೂರು ವರ್ಷಗಳಿಂದ ಸರ್ಕಾರಗಳು ಹಿಂದೇಟು ಹಾಕುತ್ತಾ ಬರುತ್ತಿತ್ತು. ಇದೆಲ್ಲದಕ್ಕೂ ಈಗ ಕಾಲ ಕೂಡಿ ಬಂದಿದು, ಲೋಕಸಭಾ ಚುನಾವಣಾ ಫಲಿತಾಂಶ ಹೊರ ಬಿದ್ದ ಬಳಿಕ ಚುನಾವಣಾ ದಿನಾಂಕ ತಿಳಿಯಲಿದೆ.