ವಿಜಯಪುರ: ಲಿಂಗಾಯತ ಸಮಾಜದ ಎಲ್ಲಾ ಒಳ ಪಂಗಡಗಳಿಗೂ ಮೀಸಲಾತಿ ಸಿಗಬೇಕು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಪ್ರತಿಪಾದಿಸಿದರು.
ಲಿಂಗಾಯತ ಸಮಾಜದ ಎಲ್ಲಾ ಉಪ ಪಂಗಡಗಳಿಗೆ ಒಂದೇ ಸೂರಿನಡಿ ಮೀಸಲಾತಿ ಸಿಗಬೇಕು. ಒಕ್ಕಲಿಗರಿಗೆ ಸಿಕ್ಕ ಮಾದರಿಯಲ್ಲಿ ನಮಗೂ ಮೀಸಲಾತಿ ಸಿಗಬೇಕು ಎಂದು ಆಗ್ರಹಿಸಿದರು.
ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಮಾನ್ಯತೆ ಸಿಕ್ಕರೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಹೆಚ್ಚಿನ ಅವಕಾಶಗಳು ಸಿಗುತ್ತಿದ್ದವು. ಆದರೆ, ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆ ಸಿಗುವುದರಿಂದ ಆಗುವ ಲಾಭದ ಕುರಿತು ಜನರು ಸರಿಯಾಗಿ ಅರ್ಥೈಸಿಕೊಳ್ಳಲಿಲ್ಲ ಎಂದು ಹೇಳಿದರು.
ಇನ್ನು ಹಿಂದು ಧರ್ಮ ಬೇರೆ, ಲಿಂಗಾಯತ ಧರ್ಮ ಬೇರೆ ಎಂಬ ಸಾಣೆಹಳ್ಳಿ ಶ್ರೀಗಳ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಇದರ ಬಗ್ಗೆ ನಾನು ಮಾತನಾಡುವುದಿಲ್ಲ. ನಾನು ಮಾತನಾಡಿದರೆ ರಾಜಕೀಯ ಬಣ್ಣ ಕೊಡುತ್ತಾರೆ ಎಂದರು.
ಜನ ಗಣತಿ ಸಂದರ್ಭದಲ್ಲಿ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಹಾಗೂ ಜಾತಿ ಕಾಲಂನಲ್ಲಿ ಜಾತಿಯ ಹೆಸರು ಬರೆಸಲು ತೀರ್ಮಾನಿಸಿದ್ದಾರೆ ಎಂದರು.