ಬೆಂಗಳೂರು: ಜನಾಕರ್ಷಣೆ ಮಾಡುವ ಉದ್ದೇಶದಿಂದ ವಿಧಾನಸೌಧಕ್ಕೆ ನೂತನವಾಗಿ ಅಳವಡಿಸಿರುವ ವರ್ಣರಂಜಿತ ದೀಪಗಳ ಲೋಕಾರ್ಪಣೆ ಏ.6 ರಂದು ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ವಿಧಾನಸೌಧ ಪ್ರಜಾಪ್ರಭುತ್ವದ ದೇಗುಲ. ಜನಾಕರ್ಷಣೆ ಮಾಡುವ ಉದ್ದೇಶದಿಂದ ಸರ್ಕಾರಕ್ಕೆ ಮನವಿ ಮಾಡಿದ್ದೆ ಎಂದರು.
ಈಗಾಗಲೇ ಬೆಳಗಾವಿಯಲ್ಲಿ ವಾರದ ಕೊನೆಯ ದಿನಗಳಲ್ಲಿ ದೀಪಾಲಂಕಾರ ಆಕರ್ಷಣೆ ಆಗುತ್ತಿದೆ. ಈಗ ವಿಧಾನಸೌಧದಲ್ಲೂ ಅದೇ ರೀತಿ ಮಾಡಲಾಗುವುದು. 6 ರಿಂದ 10 ಗಂಟೆವರೆಗೆ ದೀಪಾಲಂಕಾರ ಇರುತ್ತದೆ. ವಿಶೇಷ ದಿನಗಳಲ್ಲಿ ಹಣ ಖರ್ಚು ಆಗುತ್ತಿದ್ದಕ್ಕೆ ಈಗ ಬ್ರೇಕ್ ಬಿದ್ದಿದೆ ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಅವರು ಏ.6 ರಂದು ದೀಪಾಲಂಕಾರ ಉದ್ಘಾಟನೆ ನಡೆಸಲಿದ್ದು, ಅಂದಿನ ದಿನ ಸಾರ್ವಜನಿಕರಿಗೆ ಅವಕಾಶ ಕೊಡುತ್ತೇವೆ. ಭಾನುವಾರ ಪೊಲೀಸ್ ಬ್ಯಾಂಡ್ ಒಂದೊಂದು ದಿನ ಒಂದೊಂದು ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತದೆ ಎಂದು ಮಾಹಿತಿ ನೀಡಿದರು.
ಸಾರ್ವಜನಿಕರ ವಿಧಾನಸೌಧ ಪ್ರವೇಶ ಹಾಗೂ ಭದ್ರತೆಯ ಕುರಿತು ಮಾತನಾಡಿದ ಅವರು, ಸರ್ಕಾರಕ್ಕೆ ಸಲಹೆ ಸೂಚನೆ ನೀಡಿದ್ದೇವೆ. ಬ್ಯಾಗ್ ಜೊತೆ ಬರಬಾರದು, ಆಧಾರ್ ಕಾರ್ಡ್ ತರುವಂತೆ ಸೂಚನೆ, ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡುವಂತೆ ಸೂಚಿಸಿದ್ದೇವೆ ಎಂದು ತಿಳಿಸಿದರು.





