ಬೆಂಗಳೂರು: ಸುಪ್ರೀಂಕೋರ್ಟ್ ನಿರ್ದೇಶನದಂತೆ ತೀವ್ರ ಅನಾರೋಗ್ಯಕ್ಕೊಳಗಾಗಿ ಯಾವುದೇ ಚಿಕಿತ್ಸೆ ನೀಡಿದರೂ ಗುಣಮುಖರಾಗಲು ಸಾಧ್ಯವೇ ಇಲ್ಲದ ರೋಗಿಗಳಿಗೆ ಘನತೆಯಿಂದ ಸಾಯುವ ಹಕ್ಕನ್ನು ರಾಜ್ಯದಲ್ಲಿ ಜಾರಿ ಮಾಡಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಚೇತರಿಕೆಯ ಭರವಸೆ ಇಲ್ಲದೆ ಮಾರಕ ಆರೋಗ್ಯದಿಂದ ಬಳಲುತ್ತಿರುವವರಿಗೆ ಅಥವಾ ನಿರಂತರ ಕೋಮಾ ಸ್ಥಿತಿಯಲ್ಲಿರುವವರು ಯಾವುದೇ ಚಿಕಿತ್ಸೆ ನೀಡಿದರೂ ಬದುಕಲ್ಲ ಎಂಬ ರೋಗಿಗಳಿಗೆ ಈ ಆದೇಶದಿಂದ
ಅವರು ಘನತೆಯಿಂದ ಸಾವನ್ನಪ್ಪಲು ಅವಕಾಶ ಸಿಕ್ಕಂತಾಗುತ್ತದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ದಿನೇಶ್‌ಗುಂಡೂರಾವ್, ರೋಗಿಯು ಘನತೆಯಿಂದ ಸಾಯುವ ಹಕ್ಕಿಗಾಗಿ ಸುಪ್ರೀಂಕೋರ್ಟ್ ನಿರ್ದೆಶವನ್ನು ಜಾರಿಗೆ ತರಲು ಐತಿಹಾಸಿಕ ಆದೇಶ ಹೊರಡಿಸಿದ್ದೇವೆ. ಇದು ಚೇತರಿಕೆಯ ಭರವಸೆ ಇಲ್ಲದ ಮಾರಕ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಮುಂದೆ ಜೀವ ಉಳಿಸುವ ಚಿಕಿತ್ಸೆಯಿಂದ ಪ್ರಯೋಜನ ಆಗಲ್ಲ ಎಂಬುದನ್ನು ದೃಢೀಕರಿಸಿದ ನಂತರ ಘನತೆಯಿಂದ ಸಾಯುವ ಅವಕಾಶವನ್ನು ಈ ಕಾನೂನು ನೀಡುತ್ತದೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕ ರಾಜ್ಯ ಪ್ರಗತಿಪರ ರಾಜ್ಯವಾಗಿದ್ದು, ನ್ಯಾಯಯುತ ಸಮಾಜಕ್ಕಾಗಿ ಉದಾರ ಮತ್ತು ಸಮಾನ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ನಾವು ಯಾವಾಗಲೂ ಮುಂಚೂಣಿಯಲ್ಲಿದ್ದೇವೆ ಎಂದು ಹೇಳಿದ್ದಾರೆ.
ರೋಗಿಯು ಘನತೆಯಿಂದ ಸಾಯುವ ಹಕ್ಕಿನ ಸಂಬಂಧ ಜಿಲ್ಲಾ ಮಟ್ಟದಲ್ಲಿ ತಜ್ಞ ವೈದ್ಯರನ್ನೊಳಗೊಂಡ ಸಮಿತಿ ರಚಿಸಲಾಗುತ್ತದೆ. ಈ ಸಮಿತಿ ರೋಗಿಗೆ ಯಾವುದೇ ಚಿಕಿತ್ಸೆ ನೀಡಿದರೂ ಬದುಕುಳಿಯಲ್ಲ ಎಂದು ದೃಢಪಡಿಸಿದ ನಂತರ ಘನತೆಯಿಂದ ಸಾಯಲು ಅವಕಾಶ ಕೊಡುವ ನಿರ್ಧಾರ ಕೈಗೊಳ್ಳುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಟ್ವಿಟ್‌ನಲ್ಲಿ ತಿಳಿಸಿದ್ದಾರೆ.
ಒಬ್ಬ ರೋಗಿಯು ಗಂಭೀರ ಕಾಯಿಲೆ ಅಸ್ವಸ್ಥನಾಗಿ ಚೇತರಿಕೆ ಅಥವಾ ಗುಣಮುಖ ಆಶಾಭಾವನೆ ಹೊಂದಿಲ್ಲದೆ ಸುದೀರ್ಘ ಚಿಕಿತ್ಸೆ ಪಡೆಯುತ್ತಿದ್ದರೆ ಹಾಗೂ ಯಾವುದೇ ಚೇತರಿಕೆ ಸಾಮರ್ಥ್ಯ ಹೊಂದಿರದ ಸಂದರ್ಭದಲ್ಲಿ ನಿಗದಿಯ ಕಾರ್ಯ-ಪೂರಕವಾಗಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಅಭಿಪ್ರಾಯ ಪಟ್ಟಿತ್ತು ಈಗ ರಾಜ್ಯ ಸರ್ಕಾರ ಈ ನಿರ್ದೇಶನ ಅನುಷ್ಠಾನಗೊಳಿಸಲು ಆದೇಶ ಹೊರಡಿಸಲಾಗಿದೆ.





