Mysore
19
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಕಾಂಗ್ರೆಸ್ ಸರ್ಕಾರ ನ್ಯಾಯಾಲಯಕ್ಕೆ ಹೋಗಲಿ, ಛೀಮಾರಿ ಹಾಕಿಸಿಕೊಳ್ಳಲಿ:  ಆರ್.ಅಶೋಕ

  • ಯುಪಿಎ ಸರ್ಕಾರ ಯಾವುದೇ ನೆರವು ನೀಡಿಲ್ಲ, ಈ ಬಗ್ಗೆ ಕಾಂಗ್ರೆಸ್ ನಾಯಕರು ಮಾತನಾಡಲಿ : ಆರ್‌.ಅಶೋಕ್‌ !

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬರ ಪರಿಹಾರ ಬಿಡುಗಡೆಯ ವಿರುದ್ಧ ಖಂಡಿತವಾಗಿ ನ್ಯಾಯಾಲಯದ ಮೊರೆ ಹೋಗಲಿ ಹಾಗೂ ಛೀಮಾರಿ ಹಾಕಿಸಿಕೊಂಡು ಬರಲಿ ಎಂದು ನಾನು ಆಶಿಸುತ್ತೇನೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ವ್ಯಂಗ್ಯವಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜಕಾರಣದ ಇತಿಹಾಸದಲ್ಲೇ ದಾಖಲೆಯ ಪ್ರಮಾಣದ ಬರ ಪರಿಹಾರವನ್ನು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ನೀಡಿದೆ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಹಿಂದೆ ಯಾವುದೇ ನೆರವು ನೀಡಲಿಲ್ಲ. ಅದನ್ನು ಹೇಳುವ ಯೋಗ್ಯತೆ ಕೂಡ ರಾಜ್ಯ ಕಾಂಗ್ರೆಸ್ ನಾಯಕರಿಗಿಲ್ಲ.

ಹಿಂದೆ ಬರ-ಪ್ರವಾಹ ಪರಿಹಾರ ಕೇಳಿದ್ದಾಗ ಯುಪಿಎ ಸರ್ಕಾರ 8-9% ಮಾತ್ರ ಪರಿಹಾರ ನೀಡಿದೆ. ಆದರೆ ಮೋದಿ ಸರ್ಕಾರ ಹೆಚ್ಚುವರಿ ಪರಿಹಾರ ನೀಡಿದೆ. ನಾನು ಅಂಕಿ ಅಂಶ ಸಮೇತ ಸವಾಲು ಹಾಕಿದ್ದರೂ ಅದರ ಬಗ್ಗೆ ಯಾರೂ ಮಾತಾಡುತ್ತಿಲ್ಲ. ಇದನ್ನು ಇಟ್ಟುಕೊಂಡು ಕಾಂಗ್ರೆಸ್ ಸರ್ಕಾರ ನ್ಯಾಯಾಲಯಕ್ಕೆ ಹೋದರೆ ಎಲ್ಲ ಹಿಂದಿನ ವಿಚಾರ ಹೊರಬರಲಿದೆ. ನ್ಯಾಯಾಲಯದಿಂದ ಸರ್ಕಾರ ಛೀಮಾರಿ ಹಾಕಿಸಿಕೊಳ್ಳಲಿದೆ ಎಂದರು.

ಪ್ರಜ್ವಲ್ ರೇವಣ್ಣ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ಈ ಕುರಿತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟ ಹೇಳಿಕೆ ನೀಡಿದ್ದಾರೆ. ಕಾನೂನಿನಡಿ ಎಲ್ಲರೂ ಸಮಾನರು. ಸರ್ಕಾರ ತನಿಖೆ ಮಾಡಲು ತಂಡ ರಚಿಸಿದ್ದು, ತೀರ್ಪು ಬಂದ ನಂತರ ಸರ್ಕಾರ ಕ್ರಮ ವಹಿಸಲಿದೆ ಎಂದರು.

ಲೋಕಸಭಾ ಚುನಾವಣೆಯ ಎರಡನೇ ಹಂತದ ಪ್ರಚಾರದಲ್ಲಿ ನಾನು ಕೂಡ ತೊಡಗಿಸಿಕೊಂಡಿದ್ದೇನೆ. ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಉತ್ತಮ ಪ್ರಚಾರ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಪಾಲ್ಗೊಂಡಿದ್ದಾರೆ ಎಂದರು.

 ಶ್ರೀನಿವಾಸ ಪ್ರಸಾದ್‌ಗೆ ಸಂತಾಪ : ಹಿರಿಯ ನಾಯಕರು, ಧೀಮಂತ ನಾಯಕ, ಸಂಸದರಾದ ವಿ.ಶ್ರೀನಿವಾಸ ಪ್ರಸಾದ್ ಅವರು ದೈವಾಧೀನರಾಗಿರುವುದು ಬಹಳ ದುಃಖದ ಸಂಗತಿ. ಕರ್ನಾಟಕದ ರಾಜಕಾರಣದಲ್ಲಿ ದಲಿತ ಮುಖಂಡರಾಗಿ, ಸರಳ ಜೀವಿಯಾಗಿ, 50 ವರ್ಷಕ್ಕೂ ಅಧಿಕ ಕಾಲ ಅವರು ಜನಸೇವೆ ಸಲ್ಲಿಸಿದ್ದರು. ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡಿದ ಹಿರಿಮೆ ಕೂಡ ಅವರಿಗಿತ್ತು. ತುಳಿತಕ್ಕೊಳಗಾದ ಜನರ ದನಿಯಾಗಿ ಅವರು ಕೆಲಸ ಮಾಡಿದ್ದರು. ಅವರ ಕುಟುಂಬಕ್ಕೆ, ಹಿತೈಷಿಗಳಿಗೆ ದುಃಖ ಭರಿಸುವ ಶಕ್ತಿ ದೊರೆಯಲೆಂದು ಪ್ರಾರ್ಥಿಸುತ್ತೇನೆ ಎಂದು ಆರ್.ಅಶೋಕ ಸಂತಾಪ ಸೂಚಿಸಿದರು.

Tags: