ಚಿತ್ರದುರ್ಗ : ನಾನು ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿ ಇಲ್ಲ, ಸಿದ್ದರಾಮಯ್ಯನವರು ಹೇಳಿದಂತೆ ಅವರೇ ಮುಂದುವರೆಯುತ್ತಾರೆ. ಅವರು ಮುಖ್ಯಮಂತ್ರಿಯಾಗಿರಲಿ ಇದಕ್ಕೆ ನನ್ನ ಸಂಪೂರ್ಣ ಸಹಮತ ಇದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಸಿಎಂ ಪರ ಬ್ಯಾಟ್ ಬೀಸಿದ್ದಾರೆ.
ಐದು ವರ್ಷ ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆಗೆ ನಗರದಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕಳೆದ ನಾಲ್ಕು ತಿಂಗಳಿಂದ ಸಿಎಂ ಬದಲಾವಣೆಯ ಬಗ್ಗೆಯೇ ಚರ್ಚಿಸುತ್ತಿದ್ದೀರಿ, ಕೈಮುಗಿದು ಕೇಳುತ್ತೇನೆ ಇದನ್ನು ಬಿಡಬೇಕಿದೆ. ಈ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ಹಾಗೂ ಶಾಸಕರುಗಳು ನಿರ್ಧಾರ ಮಾಡುತ್ತಾರೆ. ಸಿಎಂ ಹೇಳಿದ್ದು ಐದು ವರ್ಷ ಕಂಟಿನ್ಯೂ ಎಂದಿದ್ದಾರೆ, ಯಾವುದೇ ಬದಲಾವಣೆ ಇದ್ದರು ಹೈಕಮಾಂಡ್ ಮಾಡಬೇಕಿದೆ ಎಂದು ಹೇಳಿದ್ದಾರೆ.
ಬಿಜೆಪಿಯವರು ನಮ್ಮ ಸರ್ಕಾರವನ್ನು ಅಸ್ತಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಐಟಿ,ಇಡಿ ಹಾಗೂ ಸಿಬಿಐ ಬಳಸಿ ಸರ್ಕಾರ ಕೆಡವುತ್ತಾರೆ. ಯಾವುದೇ ಪ್ರಕರಣಗಳನ್ನು ಹೊಂದಿರುವ ವ್ಯಕ್ತಿ ಬಿಜೆಪಿಗೆ ಸೇರಿದರೆ ವಾಷಿಂಗ್ ಪೌಡರ್ ನಿರ್ಮಾ ರೀತಿ ಸ್ವಚ್ಚವಾಗುತ್ತಾರೆ. ನನ್ನ ಬಳಿ ಈ ಕುರಿತು ಊಹಾಪೋಹಗಳ ಮಾಹಿತಿ ಇದೆ ಎಂದು ಕಿಡಿ ಕಾರಿದ್ದಾರೆ.
ಸಿಎಂ ಸಿದ್ದರಾಮಯ್ಯ 2.5 ವರ್ಷ ಸಿಎಂ ಎಂಬ ಚರ್ಚೆಗೆ ಅವರೇ ತೆರೆ ಎಳೆದಿದ್ದಾರೆ. ಪುನಃ ಮತ್ತೆ ಇದರ ಚರ್ಚೆ ಅಗತ್ಯವಿಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ, ಸಿಎಂ ಬದಲಾವಣೆಯಲ್ಲಿ ಅವರವರ ಅಭಿಪ್ರಾಯ ತಿಳಿಸಿದ್ದಾರೆ. ಬಿಜೆಪಿ ಅವರಿಗೆ ಆಪರೇಷನ್ ಕಮಲ ಹವ್ಯಾಸವಾಗಿದೆ ಎಂದು ಟೀಕಿಸಿದ್ದಾರೆ.
ವಸೂಲಿಗೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ಬಂದಿದ್ದಾರೆ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಕುಮಾರಣ್ಣ ನಿತ್ಯವೂ ಹೇಳುತ್ತಿದ್ದಾರೆ. ಅವರ ವಿರುದ್ದ ನಾನು ಏನೂ ಹೇಳಲಿ ಬಿಜೆಪಿ ವಿರುದ್ದ ಮೊದಲು ಮಾತನಾಡುತ್ತಿದ್ದರು, ಈಗ ಕಾಂಗ್ರೆಸ್ ವಿರುದ್ದ ಮಾತನಾಡುತ್ತಿದ್ದಾರೆ. ಅವರಿಗೆ ಹೇಗೆ ಬೇಕೋ ಹಾಗೆ ಮಾತನಾಡಲಿ, ಬಿಜೆಪಿ ಜೊತೆಗೆ ಮೈತ್ರಿ ಆಗಿದೆ ಹೀಗಾಗಿ ಅವರು ಮಾತನಾಡುತ್ತಿದ್ದಾರೆ ಎಂದು ತಿವಿದಿದ್ದಾರೆ.