Mysore
25
scattered clouds

Social Media

ಮಂಗಳವಾರ, 13 ಜನವರಿ 2026
Light
Dark

ಸಿಎಂ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಿ ರಾಜ್ಯಕ್ಕೆ ಮಾದರಿಯಾಗಲಿ: ಆರ್‌.ಅಶೋಕ ಆಗ್ರಹ

ಎರಡೂ ಕೋರ್ಟ್‌ಗಳು ತನಿಖೆಯಾಗಬೇಕು ಎಂದು ಅಭಿಪ್ರಾಯಪಟ್ಟಿವೆ, ಮುಖ್ಯಮಂತ್ರಿಗೆ ಬೇರೆ ದಾರಿ ಇಲ್ಲ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಿ ರಾಜ್ಯಕ್ಕೆ ಮಾದರಿಯಾಗಲಿ. ತಾವು ಸಜ್ಜನ ಎಂದು ಅವರು ಯಾವಾಗಲೂ ಹೇಳಿಕೊಳ್ಳುತ್ತಾರೆ. ಅಂತಹ ಸಜ್ಜನನಾಗುವ ಅವಕಾಶ ಎಂದರೆ ಅದು ರಾಜೀನಾಮೆ ನೀಡುವುದು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕೋರ್ಟ್‌ ಆದೇಶ ಬಂದಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಿತ್ತು. ಅಥವಾ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ನೀಡಿದ ಕೂಡಲೇ ರಾಜೀನಾಮೆ ಕೊಡಬೇಕಿತ್ತು. ಎಫ್‌ಐಆರ್‌ ಆದ ಬಳಿಕ ಪೊಲೀಸರ ಮುಂದೆ ನಿಲ್ಲಲು ಸಿದ್ದರಾಮಯ್ಯಗೆ ಸಾಧ್ಯವೇ ಇಲ್ಲ. ಕಪ್ಪು ಚುಕ್ಕೆ ಇಲ್ಲ, ನಾನು ಸಜ್ಜನ, ಮಾದರಿ ಎಂದು ಅವರು ಹೇಳಿಕೊಳ್ಳುತ್ತಾರೆ. ಈ ಅವಕಾಶ ಅವರಿಗೆ ಬಂದಿದೆ. ಕೂಡಲೇ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಿ ರಾಜ್ಯಕ್ಕೆ ಮಾದರಿಯಾಗಲಿ ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ತನಿಖೆಗೆ ಆದೇಶಿಸಿದ ರಾಜ್ಯಪಾಲರ ಕ್ರಮವನ್ನು ಹೈಕೋರ್ಟ್‌ ಎತ್ತಿ ಹಿಡಿದಿರುವುದರ ಜೊತೆಗೆ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ತನಿಖೆಗೆ ಲೋಕಾಯುಕ್ತಕ್ಕೆ ಆದೇಶಿಸಲಾಗಿದೆ. ಬಿಜೆಪಿಯಿಂದ ಸದನದಲ್ಲಿ ಈ ಕುರಿತು ಹೋರಾಟ ಮಾಡಿದಾಗ, ಇದು ಬಿಜೆಪಿ ಪ್ರೇರಿತ, ಇದು ಷಡ್ಯಂತ್ರ ಎಂದು ಸಚಿವರು ಆರೋಪ ಮಾಡಿದ್ದರು. ರಾಜಭವನಕ್ಕೆ ಮುತ್ತಿಗೆ ಹಾಕಿದ ಶಾಸಕರು, ಬಾಂಗ್ಲಾ ಮಾದರಿ ಹೋರಾಟ ಮಾಡುತ್ತೇವೆಂದು ಬೆದರಿಕೆ ಹಾಕಿದ್ದರು. ಈಗ ಇದು ತನಿಖೆಗೆ ಸೂಕ್ತ ಎಂದು ನ್ಯಾಯಾಂಗದಿಂದಲೇ ತಿಳಿದುಬಂದಿದೆ. ಅದಕ್ಕೆ ಸ್ಪಷ್ಟವಾದ ಕಾರಣವನ್ನೂ ನ್ಯಾಯಾಲಯ ಹೇಳಿದೆ ಎಂದರು.

ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬೇರೆ ದಾರಿಯಿಲ್ಲ. ಅವರು ಯಾವುದಕ್ಕೆ ಕಾಯುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ಬಿಜೆಪಿಯವರು ಪ್ರಕರಣ ದಾಖಲಿಸಿಲ್ಲ. ದೂರು ದಾಖಲಿಸಿದ್ದು ಆರ್‌ಟಿಐ ಕಾರ್ಯಕರ್ತರು ಹಾಗೂ ಹೋರಾಟಗಾರರು. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆ ಎಂದು ಆಪಾದನೆ ಮಾಡಿದ್ದರು. ಈಗ ನ್ಯಾಯಾಲಯಕ್ಕೆ ಯಾವ ರೀತಿಯ ಆಪಾದನೆ ಮಾಡುತ್ತಾರೆ? ಎಂದು ಪ್ರಶ್ನೆ ಮಾಡಿದರು.

ಎರಡೂ ಕೋರ್ಟ್‌ಗಳಲ್ಲಿ ಅವರಿಗೆ ಹಿನ್ನಡೆಯಾಗಿದೆ. ಮೇಲಿನ ಕೋರ್ಟ್‌ಗೆ ಹೋಗುವ ಅವಕಾಶ ಇದ್ದೇ ಇದೆ. ಬಿಜೆಪಿ ಏನೂ ಹೇಳಿಲ್ಲ, ಎಲ್ಲವನ್ನೂ ಕೋರ್ಟ್‌ ಹೇಳಿದೆ. ಲೋಕಾಯುಕ್ತ ತನಿಖೆಗೆ ವಹಿಸಿರುವುದರಿಂದ ಎಫ್‌ಐಆರ್‌ ಆಗಲಿದೆ. ಲೋಕಾಯುಕ್ತ ಸ್ವತಂತ್ರ ಸಂಸ್ಥೆಯಾದರೂ ಪೊಲೀಸರು, ಪೊಲೀಸ್‌ ಇಲಾಖೆಯಡಿಯಲ್ಲೇ ಬರುತ್ತಾರೆ ಎಂದರು.

ಪ್ರತಿಭಟನೆ

ವಾಲ್ಮೀಕಿ ಅಭಿವೃದ್ಧಿ ನಿಗಮ ಮತ್ತು ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸಲು ಒತ್ತಾಯಿಸಿದ್ದೇವೆ. ಪಕ್ಷದ ಎಲ್ಲ ಮುಖಂಡರು ಸೇರಿ ಗುರುವಾರ ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟಿಸಲಿದ್ದೇವೆ ಎಂದು ಆರ್‌.ಅಶೋಕ ತಿಳಿಸಿದರು.

Tags:
error: Content is protected !!