ಬೆಂಗಳೂರು: ಇದೇ ಮೊದಲ ಬಾರಿಗೆ ನಂದಿನಿ ಬ್ರ್ಯಾಂಡ್‌ನ ಪ್ರೋಟಿನ್‌ಯುಕ್ತ ದೋಸೆ ಹಾಗೂ ಇಡ್ಲಿ ಹಿಟ್ಟುನ್ನು ಕೆಎಂಎಫ್ ತಯಾರಿಸಿ ಬಿಡುಗಡೆ ಮಾಡಿದ್ದು, ಬೆಂಗಳೂರು ಜನತೆಗೆ ಕೊಡುಗೆ ನೀಡಲು ಹೊರಟಿದೆ.
ವಿಧಾನಸೌಧದಲ್ಲಿ ಇಂದು(ಡಿಸೆಂಬರ್.25) ಸಿಎಂ ಸಿದ್ದರಾಮಯ್ಯ ಅವರು ನಂದಿನಿ ಬ್ರ್ಯಾಂಡ್‌ನ ʼರೆಡಿ ಟು ಕುಕ್ʼ ನಂದಿನಿ ವೇ ಪ್ರೋಟಿನ್ ಆಧಾರಿತ ದೋಸೆ ಹಾಗೂ ಇಡ್ಲಿ ಹಿಟ್ಟನ್ನು ಅನಾವರಣಗೊಳಿಸಿದ್ದಾರೆ.
ಈ ಕುರಿತು ಸಿಎಂ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್ ಕೆಎಂಎಫ್‌ನ ನಂದಿನಿ ಉತ್ಪನ್ನಗಳು ದೇಶವ್ಯಾಪಿ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿದೆ. ರಾಷ್ಟ್ರ ರಾಜಧಾನಿ ದೆಹಲಿಗೂ ನಂದಿನಿ ಹಾಲು ತಲುಪುತ್ತಿದೆ. ದೂರದ ರಾಜಸ್ಥಾನ, ಮಧ್ಯಪ್ರದೇಶ ರಾಜ್ಯಗಳ ಪ್ರಮುಖ ನಗರಗಳಲ್ಲೂ ನಂದಿನಿ ಹಾಲಿಗೆ ಬೇಡಿಕೆ ಬರುತ್ತಿದೆ. ದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ತಿರುಪತಿಯ ಸುಪ್ರಸಿದ್ಧ ಲಡ್ಡು ಪ್ರಸಾದವನ್ನು ನಂದಿನಿ ತುಪ್ಪದಿಂದ ಸಿದ್ಧಪಡಿಸಲಾಗುತ್ತಿದೆ. ಹೀಗೆ ನಂದಿನಿಯ ನಾನಾ ಉತ್ಪನ್ನಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗುತ್ತಿದ್ದು, ಕನ್ನಡಿಗರ ಬ್ರ್ಯಾಂಡ್ ಹೆಮ್ಮರವಾಗಿ ಬೆಳೆಯುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ನಾಗರಿಕರ ಬಹುದಿನಗಳ ಅಪೇಕ್ಷೆಯಂತೆ ಇದೀಗ ನಂದಿನಿ ಉತ್ಪನ್ನಗಳಿಗೆ ಹೊಸ ಸೇರ್ಪಡೆಯಾಗಿ ದೋಸೆ ಹಾಗೂ ಇಡ್ಲಿ ಹಿಟ್ಟು ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ವೇ ಪ್ರೋಟೀನ್ ಆಧಾರಿತ ಉತ್ಕೃಷ್ಟ ಗುಣಮಟ್ಟದ ಹಿಟ್ಟು ಕೈಗೆಟುಕುವ ದರದಲ್ಲಿ ಗ್ರಾಹಕರಿಗೆ ಲಭ್ಯವಿದ್ದು, ಬೆಳಗ್ಗಿನ ಉಪಾಹಾರವು ಗರಿಗರಿ ದೋಸೆ, ಸವಿಸವಿ ಇಡ್ಲಿಯೊಂದಿಗೆ ರುಚಿ ಮತ್ತು ಆರೋಗ್ಯವನ್ನು ವೃದ್ಧಿಗೊಳಿಸಲಿದೆ ಎಂದು ಹೇಳಿದ್ದಾರೆ.





