Mysore
20
broken clouds

Social Media

ಶುಕ್ರವಾರ, 23 ಜನವರಿ 2026
Light
Dark

ಇಂಧನ ಯೋಜನೆಗಳ ಭೂ ಪರಿವರ್ತನೆ ಇನ್ಮುಂದೆ ಆಟೋಮ್ಯಾಟಿಕ್

ಬೆಂಗಳೂರು : ರಾಜ್ಯದಲ್ಲಿ ಸುಲಲಿತ ವ್ಯವಹಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಅಗತ್ಯ ಇರುವ ಭೂಮಿಯ ಸ್ವಯಂ ಚಾಲಿತ ಭೂ ಪರಿವರ್ತನೆಗಾಗಿ ಅಭಿವೃದ್ಧಿಪಡಿಸಿರುವ ತಂತ್ರಾಂಶಕ್ಕೆ ರಾಜ್ಯ ಸರ್ಕಾರ ಶುಕ್ರವಾರ ಚಾಲನೆ ನೀಡಿದೆ.

ನವೀಕರಿಸಬಹುದಾದ ಇಂಧನ ಯೋಜನೆಯ ಸ್ಥಾಪನೆಗೆ ಭೂಪರಿರ್ವತನೆಯಿಂದ ವಿನಾಯಿತಿ ನೀಡಿ, ಪರಿಭಾವಿತ (ಡೀಮ್ಡ್‌) ಭೂ ಪರಿವರ್ತನೆಗೆ 30 ದಿನಗಳ ಗಡುವಿನ ನಂತರ ಸ್ವಯಂ ಚಾಲಿತ ಭೂ ಪರಿವರ್ತನೆಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಕಂದಾಯ ಇಲಾಖೆ ಅಭಿವೃದ್ಧಿಪಡಿಸಿರುವ ತಂತ್ರಾಂಶಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಕಾಸಸೌಧದಲ್ಲಿ ಶುಕ್ರವಾರ ಚಾಲನೆ ನೀಡಿದರು.

ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 95 ಮತ್ತು ಕರ್ನಾಟಕ ಭೂ ಕಂದಾಯ ನಿಯಮಗಳ 1996ರ ನಿಯಮ 106(ಇ), 106(ಎಫ್‌)ರ ತಿದ್ದುಪಡಿಯಂತೆ ನವೀಕರಿಸಬಹುದಾದ ಇಂಧನಗಳ ಭೂ ಪರಿವರ್ತನೆಗೆ ಸಂಬಂಧಿಸಿದ ಸ್ವಯಂ ಚಾಲಿತವಾಗಿ ಭೂ ಪರಿವರ್ತನೆ ಮಾಡಲು ಕಂದಾಯ ಇಲಾಖೆ ಅಭಿವೃದ್ಧಿ ಪಡಿಸಿದ್ದ ತಂತ್ರಾಂಶವನ್ನು ಪ್ರಾಯೋಗಿಕವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಳವಡಿಸಲಾಗಿತ್ತು. ಇದು ಯಶಸ್ವಿಯಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಈ ತಂತ್ರಾಂಶ ಅಳವಡಿಕೆಗೆ ಚಾಲನೆ ನೀಡಲಾಗಿದೆ.

ತಂತ್ರಾಂಶಕ್ಕೆ ಚಾಲನೆ ನೀಡಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ” 2030ರ ವೇಳೆಗೆ 500 ಗಿಗಾವ್ಯಾಟ್‌ಗಳಷ್ಟು ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಹೊಂದುವ ದೇಶದ ಗುರಿಗೆ ಪೂರಕವಾಗಿ ಯೋಜನೆಗಳ ಅನಷ್ಠಾನಕ್ಕೆ ಕರ್ನಾಟಕ ಬದ್ಧವಾಗಿದೆ. ಇಂಧನ ಭದ್ರತೆ ಒದಗಿಸುವ ಜವಾಬ್ದಾರಿ ಜತೆಗೆ ಪರಿಸರ ಸಂರಕ್ಷಣೆಯೂ ಅತಿ ಮುಖ್ಯ. ಈ ನಿಟ್ಟಿನಲ್ಲಿ ಪಳಿಯುಳಿಕೆ ಇಂಧನದ ಬಳಕೆ ತಗ್ಗಿಸಿ, ನವೀಕರಿಸಬಹುದಾದ ಇಂಧನದ ಬಳಕೆಗೆ ಒತ್ತು ನೀಡಬೇಕಿದೆ. ಹಾಗಾಗಿ, ನವೀಕರಿಸಬಹುದಾದ ಯೋಜನೆಗಳಿಗೆ ಭೂ ಮಾಲೀಕರಿಂದ ಭೂಮಿ ಪಡೆಯಲು ಅನುಕೂಲವಗುವಂತೆ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ,” ಎಂದರು.

“ಕರ್ನಾಟಕವು ಜಾಗತಿಕ ಮಟ್ಟದಲ್ಲಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವುದರಲ್ಲೂ ಮುಂಚೂಣಿಯಲ್ಲಿದ್ದು, 2025ರ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ನವೀಕರಿಸಬಹುದಾದ ಇಂಧನ ವಲಯಕ್ಕೆ 4 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತದ ಹೂಡಿಕೆ ಒಪ್ಪಂದಗಳಾಗಿವೆ. ಇದು ರಾಜ್ಯವು ಪಡೆದುಕೊಂಡಿರುವ ಒಟ್ಟು ಹೂಡಿಕೆಯ ಸುಮಾರು ಶೇ. 40 ರಷ್ಟು. ಸುಲಲಿತ ವ್ಯವಹಾರಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಭೂ ಪರಿವರ್ತನೆಯ ನಿಯಮಗಳನ್ನು ಸರಳಗೊಳಿಸುವ ಬಗ್ಗೆ ಸಮಾವೇಶದಲ್ಲಿ ನೀಡಿದ್ದ ಭರವಸೆಯನ್ನ ಈ ತಂತ್ರಾಂಶ ಬಿಡುಗಡೆ ಮೂಲಕ ಈಡೇರಿಸಲಾಗಿದೆ. ಭೂ ಪರಿವರ್ತನೆಯ ಕಾನೂನು ಸರಳಗೊಳಿಸುವ ಜತೆಗೆ ಪ್ರಕ್ರಿಯೆಯನ್ನು ಆನ್‌ಲೈನ್‌ ನಲ್ಲಿ ನಡೆಸುವ ಮೂಲಕ ಪಾರದರ್ಶಕತೆಗೆ ಒತ್ತು ನೀಡಲಾಗಿದೆ,” ಎಂದರು.

” ರಾಜಸ್ಥಾನ ಹಾಗೂ ಗುಜರಾತಿನಲ್ಲಿ ಬರಡು ಭೂಮಿ ಹೆಚ್ಚಿದ್ದು, ಅಲ್ಲಿ ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಯೆಥೇಚ್ಛವಾಗಿ ಭೂಮಿ ದೊರೆಯುತ್ತದೆ. ಕರ್ನಾಟಕದಲ್ಲಿ ಫಲವತ್ತಾದ ಕೃಷಿ ಭೂಮಿ ಹೆಚ್ಚಿದ್ದು, ಕೃಷಿಯೇತರ ಭೂಮಿ ಲಭ್ಯತೆ ಕಡಮೆ ಇದ್ದರೂ, ನವೀಕರಿಸಬುದಾದ ಯೋಜನೆಗಳ ಅನುಷ್ಠಾನದಲ್ಲಿ ನಾವು ಹಿಂದೆ ಉಳಿದಿಲ್ಲ ಎಂಬದು ಹೆಮ್ಮೆಯ ವಿಷಯ. ಇಂಧನ ಸಚಿವರಾದ ಕೆ.ಜೆ ಜಾರ್ಜ್‌ ಅವರೂ ನವೀಕರಿಸಬಹುದಾದದ ಯೋಜನೆಗಳ ಭೂ ಪರಿವರ್ತನೆಯ ಕಾನೂನು ಸರಳಗೊಳಿಸಲು ಕೋರಿ ಹಲವಾರು ಸಭೆಗಳನ್ನು ನಡೆಸಿದ್ದರು” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಮೆಗಾ ಇಂಜಿನಿಯರಿಂಗ್ ಅಂಡ್‌ ಇನ್ ಫ್ರಾಸ್ಟ್ರಕ್ಷನ್‌ ಕಂಪನಿಯ ಸಿಇಓಗೆ ಸ್ವಯಂ ಚಾಲಿತ ಭೂ ಪರವರ್ತನೆಯ ದಾಖಲೆಗಳನ್ನು ಕಂದಾಯ ಸಚಿವರು ಹಸ್ತಾಂತರಿಸಿದರು. ತಂತ್ರಾಂಶ ಚಾಲನೆಗೂ ಮೊದಲು ನವೀಕರಿಸಬಹುದಾದ ಇಂಧನ ಸಂಸ್ಥೆಗಳ ಮುಖ್ಯಸ್ಥರು, ನವೀಕರಿಸಬಹುದಾದ ಇಂಧನ ಸಂಸ್ಥೆಗಳ ಒಕ್ಕೂಟದ ಪ್ರತಿನಿಧಿಗಳೊಂದಿಗೆ ಸಚಿವರು ಮತ್ತು ಅಧಿಕಾರಿಗಳು ಸಂವಾದ ನಡೆಸಿದರು.

ಕಾರ್ಯಕ್ರಮದಲ್ಲಿ ಕ್ರೆಡಲ್‌ ಅಧ್ಯಕ್ಷ ಟಿ.ಡಿ ರಾಜೇಗೌಡ, ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತ, ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್‌ ಕಟಾರಿಯಾ, ಕಂದಾಯ ಇಲಾಖೆ ಆಯುಕ್ತರಾದ ಮೀನಾ ನಾಗರಾಜ್‌, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್‌.ಶಿವಶಂಕರ್‌, ಕ್ರೆಡಲ್‌ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ ಉಪಸ್ಥಿತರಿದ್ದರು.

Tags:
error: Content is protected !!