Mysore
24
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪಕ್ಷ, ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ಬಲಿಷ್ಠವಾಗಿದೆ: ಲಕ್ಷ್ಮೀ ಹೆಬ್ಬಾಳಕರ್

Lakshmi Hebbalkar

ಬೆಂಗಳೂರು : ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪಕ್ಷ, ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ಬಲಿಷ್ಠವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಕಾರ್ಯಕರ್ತರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಸಚಿವರು, 25 ವರ್ಷಗಳ ಹಿಂದೆ ಪಕ್ಷದ ಕಚೇರಿಗೆ ಮೊದಲ ಬಾರಿಗೆ ಸಾಮಾನ್ಯ ಕಾರ್ಯಕರ್ತೆಯಾಗಿ ಭೇಟಿ ನೀಡಿದ್ದು, ನನ್ನ ಮನಸ್ಸಿನಲ್ಲಿ ಇನ್ನು‌ ಹಚ್ಚಹಸಿರಾಗಿ ನೆನಪಿದೆ ಎಂದು ಹೇಳಿದರು.

ಸಾಮಾನ್ಯ ಕಾರ್ಯಕರ್ತೆಯಾಗಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡೆ. ಇಂದು ಇಡೀ‌ ಕ್ಯಾಬಿನೆಟ್ ನಲ್ಲಿ ಒಬ್ಬಳೇ ಮಹಿಳಾ ಮಂತ್ರಿ ಆಗಿರುವೆ. ಎರಡು ಬಾರಿ ಚುನಾವಣೆಯಲ್ಲಿ ಸೋತರೂ ಮತ್ತೆ ನನಗೆ ಚುನಾವಣೆಯಲ್ಲಿ ನಿಲ್ಲಲು‌ ಅವಕಾಶ ಮಾಡಿಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ‌ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ‌ಡಿ.ಕೆ.ಶಿವಕುಮಾರ್ ಅವರಿಗೆ ಋಣಿಯಾಗಿರುವೆ. ಕಾಂಗ್ರೆಸ್ ಪಕ್ಷಕ್ಕೆ ಯಾರೇ ಬಂದರೂ ಪಕ್ಷದ ಸಿದ್ದಾಂತದ ಮೇಲೆ ನಂಬಿಕೆ ಇಟ್ಟುಕೊಂಡು ಬರಬೇಕು ಎಂದು ಸಚಿವರು ಹೇಳಿದರು.

ಮಾರ್ಗರೇಟ್ ಆಳ್ವಾ ನನಗೆ ಸ್ಫೂರ್ತಿ
ನಾನು ರಾಜಕೀಯಕ್ಕೆ ಬರಲು ಮಾರ್ಗರೇಟ್ ಆಳ್ವಾ ಅವರೇ ಸ್ಫೂರ್ತಿ. ಮಾರ್ಗರೇಟ್ ಆಳ್ವಾ ಅವರು ನನಗೆ ಅವಕಾಶ ಕೊಡಲಿಲ್ಲ ಅಂದರೆ ನಾನು ರಾಜಕೀಯವಾಗಿ ಬೆಳೆಯಲು ಸಾಧ್ಯವಿರಲಿಲ್ಲ. ಬೂತ್ ಏಜೆಂಟ್ ಆಗಿ ಕೆಲಸ ಮಾಡಿರುವೆ, ನನ್ನನ್ನು ಗುರುತಿಸಿದ್ದು ಮಾರ್ಗರೇಟ್ ಆಳ್ವಾ. ನನ್ನ ಎಲ್ಲಾ ಶ್ರೇಯಸ್ಸು ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ ಸಲ್ಲುತ್ತದೆ ಎಂದರು.

2023ರ ಚುನಾವಣೆಗೂ ಮುನ್ನ ಕೊಟ್ಟಿದ್ದ ಬಹುತೇಕ ಭರವಸೆಗಳನ್ನು ಈಡೇರಿಸಿದ್ದೇವೆ. 136 ಸ್ಥಾನಗಳನ್ನು ಗೆದ್ದು ಬಂದರೂ ಆರು ತಿಂಗಳು ಸರ್ಕಾರ ಇರಲ್ಲ ಎಂದು ಬಿಜೆಪಿಯವರು ಹೇಳಿದ್ದರು‌‌. ಗ್ಯಾರಂಟಿ ಯೋಜನೆಗಳು ಅನುಷ್ಠಾನ ಆಗಲ್ಲ‌ ಅಂತ ಟೀಕಿಸಿದ್ದರು. ಗ್ಯಾರಂಟಿ ಯೋಜನೆಗಳು ಅನುಷ್ಠಾನಕ್ಕೆ ಬಂದರೂ ಬಿಜೆಪಿಯವರು ಸರ್ಕಾರದ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಕಳೆದ ನವೆಂಬರ್ ನಲ್ಲಿ ನಡೆದ ಮೂರು ಕ್ಷೇತ್ರಗಳ ಉಪ‌ ಚುನಾವಣೆಯಲ್ಲಿ ಜನರು ನಮ್ಮ ಕೈಹಿಡಿದಿದ್ದಾರೆ. ಇದಕ್ಕೆ ಗ್ಯಾರಂಟಿ ಯೋಜನೆಗಳು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನಪ್ರಿಯತೆಯೇ ಸಾಕ್ಷಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆರೋಪಿಸಿದರು. ‌

ಕಾಂಗ್ರೆಸ್ ಪಕ್ಷ ಬಡವರ, ಹಿಂದುಳಿದವರ ಪರವಾಗಿದೆ, ಸಾಮಾಜಿಕ ಬದ್ಧತೆ ಹೊಂದಿರುವ ಪಕ್ಷ. ಸ್ವಾ‌ತಂತ್ರ್ಯ ಬಂದ ನಂತರ‌ ಭಾರತ ಹೇಗಿತ್ತು, ಈಗ ಹೇಗಿದೆ ಎಂಬುದನ್ನು ಗಮನಿಸಬೇಕು. ದೇಶದ ಅಭಿವೃದ್ಧಿಗೆ ನಮ್ಮ ಪಕ್ಷದ ಕೊಡುಗೆ ಅಪಾರ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ಮುಂಬರುವ ಜಿಲ್ಲಾ‌ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗಳಿಗೆ ಎಲ್ಲರೂ ಸನ್ನದ್ಧರಾಗಬೇಕು ಎಂದು ಸಚಿವರು ಕರೆ ನೀಡಿದರು.

ಈ ವೇಳೆ ಬೆಂಗಳೂರು ಪೂರ್ವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ನಂದಕುಮಾರ್, ಬಾಲಭವನದ ಅಧ್ಯಕ್ಷರಾದ ಬಿ.ಆರ್.ನಾಯ್ಡು, ಉಪಾಧ್ಯಕ್ಷರಾದ ಅಕ್ಕಯ್ಯ ಪದ್ಮಶಾಲಿ, ಮುಖಂಡರಾದ ಪ್ರಭಾಕರ್ ಗೌಡ, ಸುದೀಂದ್ರ, ನಟರಾಜ್ ಗೌಡ, ಕಮಲಾಕ್ಷಿ ರಾಜಣ್ಣ, ದೀಪಕ್ ತಿಮ್ಮಯ್ಯ, ಅಮರೇಶ್ ಪಾಪಣ್ಣ, ಪಲ್ಲವಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

Tags:
error: Content is protected !!