ಬೆಂಗಳೂರು : ಕೆಎಸ್‌ಆರ್‌ಟಿಸಿ ಸ್ಟಾಫ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ, ಕಾರ್ಮಿಕ ಮುಖಂಡ ಎಚ್.ವಿಅನಂತ್ ಸುಬ್ಬರಾವ್ (85) ಬುಧವಾರ ಸಂಜೆ ನಿಧನರಾಗಿದ್ದಾರೆ.
ಬೆಂಗಳೂರಿನ ವಿಜಯನಗರದಲ್ಲಿರುವ ತಮ್ಮ ಮನೆಯಲ್ಲಿ ಸಂಜೆ ಆರು ಗಂಟೆ ಹೊತ್ತಿಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮನೆಯಲ್ಲಿದ್ದಾಗ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಬಳಿಕ ವೈದ್ಯರ ಸಲಹೆ ಮೇರೆಗೆ ಕೂಡಲೇ ಆಸ್ಪತ್ರೆಗೆ ದಾಖಲಿಸುವಾಗ ದಾರಿಮಧ್ಯೆ ಕೊನೆಯುಸಿರೆಳೆದರು.
ಕಳೆದ ಐದು ದಶಕಗಳಿಂದ ಸಾರಿಗೆ ನೌಕರರ ಪರ ಹೋರಾಟ ಮಾಡಿಕೊಂಡು ಬಂದಿದ್ದ ಸುಬ್ಬರಾವ್ ನಾಳೆ ಇದ್ದ (ಜನವರಿ 29) ಸಾರಿಗೆ ನೌಕರರ ಬೆಂಗಳೂರು ಚಲೋಗೆ ಕರೆ ನೀಡಿದ್ದರು. ಆದ್ರೆ, ಇದೀಗ ಅವರ ನಿಧನದಿಂದಾಗಿ ಬೆಂಗಳೂರು ಚಲೋ ಮುಂದೂಡಿಕೆಯಾಗಿದ್ದು, ಎಂದಿನಂತೆ ಬಸ್ ಸಂಚಾರ ಇರಲಿದೆ.
ಅನಂತ್ ಸುಬ್ಬರಾವ್ ಮೂಲತಃ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನವರು. ಅನಂತ ಸುಬ್ಬರಾವ್ ನೇತೃತ್ವದಲ್ಲೇ ನಾಳೆ ಮುಷ್ಕರ ಹಾಗೂ ಬೆಂಗಳೂರು ಚಲೋ ನಡೆಸಲು ಸಾರಿಗೆ ನೌಕರರು ನಿರ್ಧರಿಸಿದ್ದರು. ಈಗ ಅನಂತ್ ಸುಬ್ಬರಾವ್ ನಿಧನರಾದ ಹಿನ್ನಲೆಯಲ್ಲಿ ನಾಳೆ ನಡೆಯಬೇಕಾಗಿದ್ದ ಸಾರಿಗೆ ನೌಕರರ ಮುಷ್ಕರ ಹಾಗೂ ಬೆಂಗಳೂರು ಚಲೋವನ್ನು ಮುಂದೂಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಎಂದಿನಂತೆ ಬಸ್ ಓಡಾಟ
ವಿವಿಧ ಬೇಡಿಕೆ ಈಡೇರಿಸುವಂತೆ ನಾಲ್ಕು ನಿಗಮದ ಸಾರಿಗೆ ನೌಕರರು ಬೆಂಗಳೂರು ಚಲೋ ಪ್ರತಿಭಟನೆಗೆ ಕರೆ ನೀಡಿದ್ದರು. ಇದರಿಂದ ನಾಳೆ (ಜನವರಿ 29) ಬಸ್ ಸಂಚಾರ ಇರುತ್ತಾ ಇಲ್ಲಾ ಎಂದು ಪ್ರಯಾಣಿಕರಲ್ಲಿ ಗೊಂದಲ ಮೂಡಿಸಿತ್ತು. ಆದ್ರೆ, ಸಾರಿಗೆ ನೌಕರರ ಸಂಘದ ಮುಖಂಡ ಸಾವನ್ನಪ್ಪಿರುವುದರಿಂದ ಬೆಂಗಳೂರು ಚಲೋ ಮುಷ್ಕರವನ್ನು ಮುಂದೂಡಿದ್ದಾರೆ. ಹೀಗಾಗಿ ನಾಳೆ ಎಂದಿನಂತೆ ಬಸ್ ಸಂಚಾರ ಇರಲಿದೆ.





