Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ನನಗೆ ನೋಟಿಸ್ ಬಂದಿಲ್ಲ, ಸ್ವಇಚ್ಛೆಯಿಂದ ಬಂದಿದ್ದೇನೆ ಎಂದ ಕೇಂದ್ರ ಸಚಿವ ಕುಮಾರಸ್ವಾಮಿ

“ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇನೆ; ಹಿಂದೆಯೂ ಒಮ್ಮೆ ನನ್ನ ಹೇಳಿಕೆ ದಾಖಲಿಸಿಕೊಂಡಿದ್ದರು”

ಗಂಡಾಂತರ ತಂದುಕೊಳ್ಳುವ ಕೆಲಸವನ್ನು ನಾನು ಅಧಿಕಾರದಲ್ಲಿ ಇದ್ದಾಗ ಮಾಡಿಲ್ಲ ಎಂದ ಕೇಂದ್ರ ಸಚಿವರು

ಬೆಂಗಳೂರು: ನಾನು ಸ್ವಇಚ್ಛೆಯಿಂದ ಲೋಕಾಯುಕ್ತ ಅಧಿಕಾರಿಗಳ ಮುಂದೆ ಹಾಜರಾಗಿದ್ದೇನೆ. ನನಗೆ ಯಾವ ನೋಟಿಸ್ ಕೂಡ ಬಂದಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಲೋಕಾಯುಕ್ತ ಅಧಿಕಾರಿಗಳ ಮುಂದೆ ಹಾಜರಾದ ನಂತರ ಅಲ್ಲಿಯೇ ಮಾಧ್ಯಮಗಳ ಜತೆ ಅವರು ಮಾತನಾಡಿದರು.

ಬೆಳಗ್ಗೆಯಿಂದ ನೋಡುತ್ತಿದ್ದೇನೆ. ಕುಮಾರಸ್ವಾಮಿ ಅವರಿಗೆ ರಾಜಕೀಯ ಗಂಡಾಂತರ, ಭೂ ಗಂಡಾಂತರ ಎಂದು ಚರ್ಚೆ ನಡೆಯುತ್ತಿದೆ. ಆದರೆ; ನನ್ನ ರಾಜಕೀಯ ಜೀವನದಲ್ಲಿ ಗಂಡಾಂತರ ತಂದುಕೊಳ್ಳುವ ಯಾವುದೇ ಕೆಲಸವನ್ನೂ ಮಾಡಿಲ್ಲ ಎಂದು ಕೇಂದ್ರ ಸಚಿವರು ನೇರ ಮಾತುಗಳಲ್ಲಿ ಹೇಳಿದರು.

ರಾಜಕೀಯ ಒತ್ತಡದಿಂದ ನನ್ನ ಮೇಲೆ ಈ ಪ್ರಕರಣವನ್ನು ಮುನ್ನೆಲೆಗೆ ತರಲಾಗಿದೆ. ಈ ಪ್ರಕರಣದಲ್ಲಿ ಕಾನೂನುಬಾಹಿರವಾಗಿ ನನ್ನಿಂದ ಆದೇಶ ಆಗಿಲ್ಲ. ಒಂದು ವೇಳೆ ನಾನು ಡಿನೋಟಿಫಿಕೇಶನ್ ಮಾಡಬೇಕು ಎಂದು ಅಂದುಕೊಂಡಿದ್ದಿದ್ದರೆ ನಾನೇ ಮಾಡುತ್ತಿದ್ದೆ. ಅಷ್ಟು ಸಾಮಾನ್ಯ ತಿಳಿವಳಿಕೆ ನನ್ನ ಬಗ್ಗೆ ಟೀಕೆ ಮಾಡುತ್ತಿರುವವರಿಗೆ ಇಲ್ಲ ಎಂದು ಕೇಂದ್ರ ಸಚಿವರು ತರಾಟೆಗೆ ತೆಗೆದುಕೊಂಡರು.

ಈಗಾಗಲೇ ಈ ಪ್ರಕರಣದ ಬಗ್ಗೆ ಲೋಕಾಯುಕ್ತರು ಹೇಳಿಕೆ ದಾಖಲಿಸಿಕೊಂಡಿದ್ದರು. ಈಗ ಮತ್ತೆ ಹೇಳಿಕೆ ನೀಡಿದ್ದೇನೆ. ಈ ಪ್ರಕರಣದ ಬಗ್ಗೆ ನನಗೆ ಯಾವ ಆತಂಕವೂ ಇಲ್ಲ ಎಂದು ಅವರು ತಿಳಿಸಿದರು.

ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇನೆ

ಲೋಕಾಯುಕ್ತ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ. 2015ರ ಸಿದ್ದರಾಮಯ್ಯ ಸರ್ಕಾರವಿದ್ದಾಗ ನನ್ನ ಮೇಲೆ ಹಾಕಿರುವ ಕೇಸ್ ಇದು. ಪಲಾಯನ ಮಾಡುವ ಅಗತ್ಯ ನನಗೆ ಇಲ್ಲ. ಅಂಥ ಜಾಯಮಾನ ನನ್ನದಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.

ಯಾವ ಮುಖ ಇಟ್ಕೊಂಡು ನನ್ನ ಮುಖ್ಯಮಂತ್ರಿ ಮಾಡಿಕೊಂಡಿದ್ದರು?

ನನ್ನ ಬಗ್ಗೆ ಹೇಳಿಕೆ ಕೊಟ್ಟಿರುವ ಅಷ್ಟೂ ಮಂದಿ ಸಚಿವರು, ಶಾಸಕರು 2018ರಲ್ಲಿ ನನನ್ನು ಸಿಎಂ ಮಾಡಿದ್ದವರು. ಅಂತಹ ಆರೋಪ ನನ್ನ ಮೇಲೆ ಇದ್ದಾಗ ಕಾಂಗ್ರೆಸ್ ಪಕ್ಷ ನನ್ನ ಜತೆ ಸರಕಾರ ಮಾಡಿದ್ದೇಕೆ? ಯಾವ ಮುಖ ಇಟ್ಕೊಂಡು ನನ್ನ ಮುಖ್ಯಮಂತ್ರಿ ಮಾಡಿಕೊಂಡಿದ್ದರು ಇವರು. ಆವತ್ತು ಕುಮಾರಸ್ವಾಮಿ ಕೆಟ್ಟವರಾಗಿರಲಿಲ್ಲವೇ? ಎಂದು ಅವರು ಕಿಡಿಕಾರಿದರು.

ಬೆಳಗ್ಗೆ ಮುಖ್ಯಮಂತ್ರಿಗಳ ಹೇಳಿಕೆಯನ್ನು ಗಮನಿಸಿದ್ದೇನೆ. ಅವರಿಗೂ ಉತ್ತರ ಕೊಡುತ್ತೇನೆ. ಇವತ್ತು ನನ್ನನ್ನು ಆರೋಪಿ ಸ್ಥಾನದಲ್ಲಿ ನೋಡುತ್ತಿರುವ ಸಚಿವ ಮಹಾಶಯರು ನನ್ನ ಸಂಪುಟದಲ್ಲಿಯೂ ಸಚಿವರಾಗಿದ್ದರು. ಆಗ ಇವರೆಲ್ಲರ ಪ್ರಾಮಾಣಿಕತೆ, ನೈತಿಕತೆ ಎಲ್ಲಿ ಹೋಗಿತ್ತು? ಎಂದು ಕೇಂದ್ರ ಸಚಿವರು ಖಾರವಾಗಿ ಪ್ರಶ್ನಿಸಿದರು.

 

Tags: