ರಾಜ್ಯದಲ್ಲಿ ಆಗಾಗ್ಗೆ ಸುದ್ದಿಯಲ್ಲಿರುವ ವಿಷಯ ಎಂದರೆ ರಾಜ್ಯ ಸರ್ಕಾರದ ಶಕ್ತಿ ಯೋಜನೆ. ಈ ಯೋಜನೆಯಡಿ ರಾಜ್ಯದ ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿದೆ. ಹಾಗಂತ ನೀವೇನಾದರೂ ನಿಮ್ಮ ಪ್ರೀತಿಯ ಸಾಕು ಪ್ರಾಣಿ-ಪಕ್ಷಿ, ದೊಡ್ಡ ಪ್ರಮಾಣದ ಲಗೇಜ್ ಕೊಂಡ್ಯೊದ್ದರೆ ಅದಕ್ಕಾಗಿ ನೀವು ದೊಡ್ಡ ಪ್ರಮಾಣದಲ್ಲೇ ಶುಲ್ಕ ಪಾವತಿಸಬೇಕಾಗುತ್ತದೆ. ಇದೀಗ ಅಂತಹದ್ದೆ ಒಂದು ಘಟನೆ ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ನಡೆದಿದೆ.
ಹೌದು, ಬೆಂಗಳೂರಿನಿಂದ ಮೈಸೂರಿಗೆ ಹೊರಟಿದ್ದ ಅಜ್ಜಿ ಮೊಮ್ಮಗಳಿಗೆ ಶಕ್ತಿ ಯೋಜನೆಯಡಿ ಉಚಿತ ಟಿಕೆಟ್ ನೀಡಿ, ಅವರು ಜೊತೆಯಲ್ಲಿ ತಂದಿದ್ದ ಲವ್ ಬರ್ಡ್ಸ್‌ಗೆ ಬರೋಬ್ಬರಿ 444 ರೂಪಾಯಿ ಪ್ರಯಾಣ ಶುಲ್ಕವನ್ನು ವಿಧಿಸಿ ಟಿಕೆಟ್ ನೀಡಲಾಗಿದೆ. ಹೀಗೆ ಪಕ್ಷಿಗಳಿಗೆ ಇಷ್ಟು ಮೊತ್ತದ ಟಿಕೆಟ್ ನೀಡಿರುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಭಾರೀ ಚರ್ಚೆಗೂ ಒಳಗಾಗಿದೆ.
ಅಜ್ಜಿ ಮೊಮ್ಮಗಳು ಬೆಂಗಳೂರಿಂದ ಮೈಸೂರು ಕಡೆಗೆ ಬಸ್‌ನಲ್ಲಿ ಉಚಿತವಾಗಿ ಪ್ರಯಾಣ ಬೆಳೆಸಿದ್ದು, ಅವರ ಜೊತೆಯಲ್ಲಿ ಪಂಜರದಲ್ಲಿ ಪಕ್ಷಿಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಅಜ್ಜಿ-ಮೊಮ್ಮಗಳಿಗೆ ಕಂಡಕ್ಟರ್ ಫ್ರೀ ಟಿಕೆಟ್ ಕೊಟ್ಟರು. ಆದರೆ ಪಂಜರದ ಗಿಳಿಗಳಿಗೆ ಪ್ರಯಾಣ ಶುಲ್ಕ ಹಾಕಿದ್ದು, ನಾಲ್ಕು ಮಕ್ಕಳು ಎಂದು ಟಿಕೆಟ್‌ನಲ್ಲಿ ನಮೂದಿಸಿದ್ದಾರೆ. ಒಂದು ಗಿಣಿಗೆ 111 ರೂ ಬಿದ್ದಿದೆ. ಒಟ್ಟು ನಾಲ್ಕು ಹಕ್ಕಿಗಳಿಗೆ 444 ರೂ ವೆಚ್ಚದ ಟಿಕೆಟ್ ನೀಡಲಾಗಿದೆ.