ಬೆಂಗಳೂರು: ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಹಾಗೂ ವಿಧಾನ ಪರಿಷತ್‌ಗೆ ರಾಜೀನಾಮೆ ನೀಡರುವ ಕೆ.ಪಿ ನಂಜುಂಡಿ ಅವರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.
ನಗರದ ಕೆಪಿಸಿಸಿ ಕಚೇರಿಯಲ್ಲಿ ಉಪಮಖ್ಯಮಂತ್ರಿ ಡಿಕೆ ಶಿವಕುಮಾರ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರ ನೇತೃತ್ವದಲ್ಲಿಂದು ಅಧಿಕೃತವಾಗಿ ನಂಜುಂಡಿ ಕಾಂಗ್ರೆಸ್ ಸೇರಿದರು.
ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿದ್ದ ಅವರು, ಕಳೆದ ಒಂದು ವಾರಗಳಿಂದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಜತೆ ಕಾಣಿಸಿಕೊಳ್ಳುತ್ತಿದ್ದರು. ಇದಾದ ಬಳಿಕ ಎಲ್ಲರೂ ನಂಜುಂಡಿ ಅವರನ್ನು ಕಾಂಗ್ರೆಸ್ ಸೇರಲಿದ್ದಾರೆ ಎಂದು ಭಾವಿಸಿದ್ದರು, ಅದನ್ನು ನಿಜ ಮಾಡಿರುವ ಅವರು ಲೋಕಸಭಾ ಚುನಾವಣಾ ವೇಳೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ.
ಸೇರ್ಪಡೆಗೊಂಡ ಬಳಿಕ ಮಾತನಾಡಿದ ಅವರು, ಬಿಜೆಪಿಯಲ್ಲಿ ನನ್ನನ್ನು ಕಡೆಗಣಿಸಲಾಗುತ್ತಿತ್ತು. ಹೀಗಾಗಿ ಬಿಜೆಪಿಗೆ ರಾಜೀನಾಮೆ ನೀಡಲು ನಮ್ಮ ಸಮಾಜ ನನ್ನನ್ನು ಕಳೆದ 2 ವರ್ಷಗಳಿಂದ ಒತ್ತಾಯಿಸುತ್ತಿತ್ತು. ಬಿಜೆಪಿಯಲ್ಲಿ ನನ್ನ ಹೋರಾಟಕ್ಕೆ ಯಾವುದೇ ಮನ್ನಣೆಯಿಲ್ಲ. ಹಾಗಾಗಿ ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.





