ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ಬಳಿಕ ರಾಜ್ಯ ಬಿಜೆಪಿ ಪಕ್ಷದಲ್ಲಿ ಹಲವು ಬದಲಾವಣೆಗಳು ಕಂಡುಬಂದವು. ಲಿಂಗಾಯಿತರ ಓಲೈಕೆಗಾಗಿ ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ನೀಡಿದರು. ನಂತರ ವಿಧಾನ ಸಭಾ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಆರ್ ಆಶೋಕ್ ನೇಮಕ ಕೂಡಾ ನಡೆದಿತ್ತು. ನೆನ್ನೆ ಪದಾಧಿಕಾರಿಗಳ ನೇಮಕ ನಡೆದರೇ ಇಂದು ಮತ್ತೊಂದು ಬದಲಾವಣೆಯನ್ನು ಬಿಜೆಪಿ ಮಾಡಿದೆ.
ಹೈ ಕಮಾಂಡ್ ನಿರ್ದೇಶನ ಮೇರೆ ಇದೀಗ ವಿಧಾನ ಪರಿಷತ್ ಗೆ ವಿಪಕ್ಷ ನಾಯಕನಾಗಿ ಕೋಟಾ ಶ್ರೀನಿವಾಸ್ ಪೂಜಾರಿ ಅವರನ್ನು ನೇಮಿಸಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೂಚನೆಯಂತೆ ಈ ಆಯ್ಕೆ ನಡೆದಿದ್ದು, ಜೊತೆಗೆ ಬಿಜೆಪಿಗೆ ಹಲವು ನಾಯಕರಿಗೆ ವಿವಿಧ ಸ್ಥಾನಗಳನ್ನು ನೀಡಲಾಗಿದೆ. ಕೋಟಾ ಅವರು ೨೦೦೯ ರಲ್ಲಿ ಮೊಲದ ಬಾರಿಗೆ ಕರ್ನಾಟಕ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದರು.
ಇನ್ನುಳಿದಂತೆ ಸುನೀಲ್ ವಲ್ಯಾಪುರೆ ಅವರನ್ನು ಪರಿಷತ್ ಉಪನಾಯಕನನ್ನಾಗಿ ನೇಮಿಸಲಾಗಿದೆ. ಅರವಿಂದ ಬೆಲ್ಲದ್ ಕೆಳಮನೆಯ ಉಪನಾಯಕ, ರವಿಕುಮಾರ್ ಪರಿಷತ್ ಸಚೇತಕ, ದೊಡ್ಡನಗೌಡ ಜಿ ಪಾಟೀಲ್ ಕೆಳಮನೆಯ ಸಚೇತಕನನ್ನಾಗಿ ಬಿಜೆಪಿ ಆಯ್ಕೆ ಮಾಡಲಾಗಿದೆ.





