Mysore
16
clear sky

Social Media

ಶನಿವಾರ, 13 ಡಿಸೆಂಬರ್ 2025
Light
Dark

ನಂಜನಗೂಡಿನಲ್ಲಿ ಪ್ರವಾಹದ ಭೀತಿ: ನದಿ ಪಾತ್ರ ಹಾಗೂ ತಗ್ಗು ಪ್ರದೇಶಗಳಿಗೆ ಭೇಟಿ ನೀಡಿದ ಕೆ.ಎಂ ಗಾಯತ್ರಿ

ನಂಜನಗೂಡು: ಕಬಿನಿ ಜಲಾಶಯದಲ್ಲಿ ಹೊರಹರಿವು ಹೆಚ್ಚಳದಿಂದ ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುತ್ತಿರುವ ಹಿನ್ನೆಲೆ ಇಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ ಅವರು ನದಿ ಪಾತ್ರ ಹಾಗೂ ತಗ್ಗು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ತಾಲ್ಲೂಕಿನ ಹುಳಿಮಾವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಕ್ಕಹಳ್ಳಿ, ಕೆಂಪಿಸಿದ್ದನಹುಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಜ್ಜಿಗೆ, ತೊರೆಮಾವು, ಹುಲ್ಲಹಳ್ಳಿ-ರಾಂಪುರ ಸೇತುವೆ, ನದಿ ಪ್ರಾಂತ್ಯದ ಪೌರಕಾರ್ಮಿಕರ ಕಾಲೋನಿ, ನಲ್ಲಿತಾಳಪುರ ಗ್ರಾಮ ಪಂಚಾಯಿತಿಯ ಕಡಬೂರು ಸೇತುವೆ ಸೇರಿದಂತೆ ತಗ್ಗು ಪ್ರದೇಶಗಳಿಗೆ ಭೇಟಿ ನೀಡಿ ಮುನ್ನೆಚ್ಚರಿಕಾ ಕ್ರಮಗಳನ್ನು ಪರಿಶೀಲಿಸಿ, ಸ್ಥಳೀಯರಿಂದ ಅಹವಾಲು ಕೇಳಿದರು.

ನಿರಂತರವಾಗಿ ಮಳೆಯಾಗುತ್ತಿರುವ ಕಾರಣ ಕಪಿಲಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದೆ. ಟಾಸ್ಕ್ ಫೋರ್ಸ್ ತಂಡವು ಕಾರ್ಯಪ್ರವೃತ್ತರಾಗಬೇಕು. ನೀರಿನ‌ ಪ್ರಮಾಣ ಹೆಚ್ಚಾದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜನ-ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುಂತೆ, ಹಾಗೂ ಸ್ಥಳೀಯ ಈಜುಗಾರರನ್ನು ಗುರುತಿಸುಬೇಕು. ಪ್ರವಾಹ ಭೀತಿ ಪ್ರದೇಶದಲ್ಲಿ ಸ್ಥಳೀಯವಾಗಿ ಸಿಬ್ಬಂದಿ ನಿಯೋಜಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ತಿಳಿಸಿದರು.

ಸಾಂಕ್ರಾಮಿಕ ರೋಗ ಹರಡದಂತೆ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಬೇಕು. ಕುಡಿಯುವ ನೀರನ್ನು ಕಾಲ ಕಾಲಕ್ಕೆ ಲ್ಯಾಬ್ ನಲ್ಲಿ ಪರೀಕ್ಷಿಸುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರಿರಿಗೆ ಸೂಚಿಸಿದರು.ಇದೇ ವೇಳೆ ಕಲುಶಿತ ನೀರು ಸೇರದಂತೆ ಪ್ರತಿದಿನ ಗ್ರಾಮ ಪಂಚಾಯಿತಿಯಲ್ಲಿ ನೀರನ್ನು FTK ಪರೀಕ್ಷೆಗೆ ಒಳಪಡಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ತಿಳಿಸಿದರು.

ಕುಡಿಯುವ ನೀರನ್ನು ಕುದಿಸಿ ಆರಿಸಿ ಕುಡಿಯುವಂತೆ ಆಶಾ ಕಾರ್ಯಕರ್ತೆಯರು ಮನೆ ಮನೆ ಭೇಟಿ ಮಾಡಿ ಜನರ ಆರೋಗ್ಯದ ಬಗ್ಗೆ ಕಾಳಜಿವಹಿಸಲು ಆರೊಗ್ಯಾಧಿಕಾರಿಗಳಿಗೆ ತಿಳಿಸಿದರು.

ಈ ವೇಳೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗಳು (ಅಭಿವೃದ್ಧಿ) ಡಾ. ಕೃಷ್ಣರಾಜು, ಗ್ರಾಮೀಣ ಕುಡಿಯುವ ನೀರು ವಿಭಾಗದ ಕಾರ್ಯ ಪಾಲಕ ಅಭಿಯಂತರರಾದ ರಂಜಿತ್ ಕುಮಾರ್ , ಕಾರ್ಯ ನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್ , ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು, ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Tags:
error: Content is protected !!