ಕೇರಳ: ನೆರೆಯ ರಾಜ್ಯ ಕೇರಳದಲ್ಲಿ ನಿಫಾ ವೈರಸ್ ಪತ್ತೆಯಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ.
ಈ ಬಗ್ಗೆ ಕೇರಳ ಆರೋಗ್ಯ ಸಚಿವೆ ವೀಣಾ ಚಾರ್ಜ್ ಮಾಹಿತಿ ನೀಡಿದ್ದು, 27 ಬಾವಲಿಗಳ ಮಾದರಿಗಳಲ್ಲಿ ಆರರಲ್ಲಿ ನಿಫಾ ವೈರಸ್ ಪತ್ತೆಯಾಗಿದೆ.
ಮಲಪ್ಪುರಂ ಜಿಲ್ಲೆಯ ಪಂಡಿಕ್ಕಾಡ್‌ನಲ್ಲಿ ಜುಲೈ ತಿಂಗಳಲ್ಲಿ ನಿಫಾ ಸೋಂಕಿನಿಂದ 14 ವರ್ಷದ ಬಾಲಕ ಸಾವನ್ನಪ್ಪಿದ್ದನು. ಈಗ ಬಾವಲಿಗಳ ಮಾದರಿಯಲ್ಲಿ ನಿಫಾ ವೈರಸ್ ಸೋಂಕು ಇರುವುದು ಪತ್ತೆಯಾಗಿದೆ.
ನಿಫಾ ವೈರಸ್ ಒಂದು ಝೋನೋಟಿಕ್ ವೈರಸ್ ಆಗಿದ್ದು, ಇದು ಸೋಂಕಿತ ಪ್ರಾಣಿಗಳು ಅಥವಾ ಕಲುಷಿತ ಆಹಾರದ ಮೂಲಕ ಮನುಷ್ಯರಿಗೆ ಹರಡುತ್ತದೆ. ಇದು ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕದ ಮೂಲಕ ನೇರವಾಗಿ ಹರಡುತ್ತದೆ.
ಇನ್ನು ನಾಯಿಗಳು, ಬೆಕ್ಕು, ಕುದುರೆ, ಕುರಿ ಸೇರಿದಂತೆ ಹಲವಾರು ಜಾತಿಯ ಸಾಕುಪ್ರಾಣಿಗಳಲ್ಲಿ ವೈರಸ್ ಕಂಡುಬಂದಿದೆ. ಪ್ರಾಣಿಗಳಿಂದ ಮನುಷ್ಯರಿಗೆ ಪ್ರಸರಣವು ಪ್ರಾಥಮಿಕವಾಗಿ ಕಲುಷಿತ ಆಹಾರ ಸೇವನೆಯ ಮೂಲಕ ಸಂಭವಿಸುತ್ತದೆ. ಬಾವಲಿಗಳು ನಿಫಾ ವೈರಸ್‌ಗೆ ನೈಸರ್ಗಿಕ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತವೆ.
ಕೇರಳದಲ್ಲಿ ನಿಫಾ ವೈರಸ್ ಕಂಡುಬಂದಿರುವ ಹಿನ್ನೆಲೆಯಲ್ಲಿ ಜನತೆಗೆ ಆತಂಕ ಮನೆಮಾಡಿದೆ. ಈ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ನಿಫಾ ವೈರಸ್ ಸೋಂಕು ಜಾಸ್ತಿ ಹರಡದಂತೆ ಕಟ್ಟೆಚ್ಚರ ವಹಿಸಲಾಗಿದೆ.