ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆ ಕಾಮಗಾರಿಯ ಬಗ್ಗೆ ಪರಿಶೀಲಿಸಿ ಯಶವಂತಪುರ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ಅವರು ಶ್ಲಾಘಿಸಿದ್ದಾರೆ.
ವಿಧಾನಸೌದದಲ್ಲಿ ಫೆ.6 ರಂದು ನಡೆದ ಅರ್ಜಿ ಸಮಿತಿ ಸಭೆಯಲ್ಲಿ, ನಾಡಪ್ರಭು ಕೆಂಪೇಗೌಡ ಬಡಾವಣೆಯ ಕಾಮಗಾರಿಯನ್ನು ನಾನು ಪರಿಶೀಲಿಸಿದ್ದು, ಈಗಾಗಲೇ ಬ್ಲಾಕ್-5 , 6, 7ರಲ್ಲಿ ಆಂತರಿಕ ರಸ್ತೆಗಳ ಡಾಂಬರೀಕರಣ ಬಹುತೇಕ ಪೂರ್ಣಗೊಂಡಿದೆ. ನಿವೇಶನದಾರರು ಮನೆ ನಿರ್ಮಾಣ ಮಾಡಲು ಮುಂದಾಗುತ್ತಿಲ್ಲಾ ಆದರೂ ಪ್ರಾಧಿಕಾರದ ಉಳಿದ ಬ್ಲಾಕ್‌ಗಳಲ್ಲಿ ಸುಮಾರು ಅಂದಾಜು ಮೊತ್ತ ರೂ 200. ಕೋಟಿಗೆ ಬಡಾವಣೆಯ ಆಂತರಿಕ ರಸ್ತೆಗಳಿಗೆ ಡಾಂಬರೀಕರಣ ಮಾಡಲು ಮುಂದಾಗಿದೆ ಎಂದು ಶ್ಲಾಘಿಸಿದ್ದಾರೆ.
ಕೆಂಪೇಗೌಡ ಬಡಾವಣೆಯು ನನ್ನ ಮತ ಕ್ಷೇತ್ರದಲ್ಲಿರುವ ಬಡಾವಣೆಯಾಗಿದ್ದು ಯಾವುದೇ ಕುಂದುಕೊರತೆಗಳಿದ್ದರೇ ಇಲಾಖೆಯವರಿಂದ ಪರಿಹರಿಸುವುದಾಗಿ ತಿಳಿಸಿದರು.
ಪ್ರಾಧಿಕಾರದವರು ಸಮಿತಿಯ ಸಭೆಗೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಆಗಿರುವ ಪ್ರಗತಿಯ ವಿವರವನ್ನು ಮುಂದಿನ ಸಭೆಗೆ ಸಲ್ಲಿಸಿ, ಈ ಅರ್ಜಿಯನ್ನು ಅಂತಿಮಗೊಳಿಸಬೇಕಾಗಿ ಸಮಿತಿಯ ಅಧ್ಯಕ್ಷರಾದ ರುದ್ರಪ್ಪ ಲಮಾಣಿ ಅವರಲ್ಲಿ ಕೋರಿದರು.
ಒಟ್ಟಾರೆಯಾಗಿ ಬಡಾವಣೆಯ ಕೆಲಸ ಹಾಗೂ ಎಂ.ಎ.ಆರ್ ರಸ್ತೆಯ ಕೆಲಸದಲ್ಲಿ ಪ್ರಗತಿಯಾಗಿದೆಯೆಂದು ತಿಳಿಸಿದರು. ಈ ಮಧ್ಯೆ ಶಾಸಕರಾದ ಸುರೇಶ್ ಕುಮಾರ್ ರವರು ಮಾತನಾಡುತ್ತಾ, ಸದರಿ ಬಡಾವಣೆಯಲ್ಲಿ ರಸ್ತೆ ಅಗೆಯದಂತೆ, ಕುಡಿಯುವ ನೀರಿನ ಸಂಪರ್ಕಕ್ಕಾಗಿ ಪ್ರಾಧಿಕಾರವು ನಿವೇಶನದಾರರಿಂದ ಪಡೆಯುತ್ತಿರುವ ಮೊತ್ತ ಅಧಿಕವಾಗಿದ್ದು, ಮತ್ತೊಮ್ಮೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಸಮಿತಿ ಸದಸ್ಯರು ಮತ್ತು ಶಾಸಕರಾದ ಯು.ಬಿ. ಬಣಕಾರ್, ಸಿ.ಎನ್.ಬಾಲಕೃಷ್ಣ, ಮಂಥರ್ ಗೌಡ, ಡಾ.ಅವಿನಾಶ್ ಜಾಧವ್, ಎಚ್.ಡಿ.ತಮ್ಮಯ್ಯ ಹಾಗೂ ಇತರರು ಇದ್ದರು.





