ಬೆಂಗಳೂರು : ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಚೇತರಿಕೆ ಕಂಡಿದ್ದು, ಏ.22ರವರೆಗೆ ಮುಂದುವರೆಯುವ ಮುನ್ಸೂಚನೆಗಳಿವೆ. ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆಗಳಿಂದಾಗಿ ರಾಜ್ಯದಲ್ಲಿ ಚದುರಿದಂತೆ ಅಲ್ಲಲ್ಲಿ ಕಳೆದ ಮೂರು ವಾರಗಳಿಂದ ಮಳೆಯಾಗುತ್ತಿದೆ. ಆದರೆ, ವ್ಯಾಪಕ ಪ್ರಮಾಣದ ಮಳೆ ರಾಜ್ಯಾದ್ಯಂತ ಬೀಳುತ್ತಿಲ್ಲ.
ನಿನ್ನೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕಲಬುರಗಿ, ಕೊಪ್ಪಳ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರದ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.
ರಾಜ್ಯದ ಒಳನಾಡಿನಲ್ಲಿ ಟ್ರಫ್ ಇರುವುದರಿಂದ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಚದುರಿದಂತೆ ಅಲ್ಲಲ್ಲಿ ಮಳೆಯಾಗುವ ಮುನ್ಸೂಚನೆಗಳಿವೆ. ಹಗುರದಿಂದ ಸಾಧಾರಣ ಮಳೆಯಾಗಲಿದ್ದು, ಕೆಲವೆಡೆ ಗುಡುಗು, ಮಿಂಚಿನಿಂದ ಕೂಡಿದ ಮಳೆಯಾಗಬಹುದು. ಇನ್ನೂ ಕೆಲವೆಡೆ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಗಳಿವೆ. ಪ್ರತಿ ಗಂಟೆಗೆ ಗಾಳಿಯ ವೇಗವು 30ರಿಂದ 40 ಕಿ.ಮೀ. ವೇಗದಲ್ಲಿರಲಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:- ಕೊಡಗು ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆ ನಿರೀಕ್ಷೆ
ನಿರಂತರವಾಗಿ ಮಳೆಯಾಗುತ್ತಿರುವ ಕಡೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಇಳಿಕೆಯಾಗಿದೆ. ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನರಿಗೆ ತಂಪಾದ ವಾತಾವರಣ ಸಿಕ್ಕಂತಾಗಿದೆ. ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಹಗುರದಿಂದ ಸಾಧಾರಣ ಮಳೆಯಾಗಿದೆ.ಏ. 20 ರವರೆಗೆ ಮಳೆ ಮುಂದುವರೆಯುವ ಸಾಧ್ಯತೆಗಳಿವೆ. ಕೆಲವೊಮೆ ಗುಡುಗು, ಮಿಂಚಿನಿಂದ ಕೂಡಿದ ಮಳೆಯಾಗಬಹುದು ಎಂದಿದ್ದಾರೆ.
ಹೆಚ್ಚಿನ ಸುದ್ದಿ:- ರಾಜ್ಯದ ಹಲವೆಡೆ ಇನ್ನೂ ಒಂದು ವಾರ * ಧಾರಾಕಾರ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ
ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ಉತ್ತರ ಒಳನಾಡಿನ ಬಹುತೇಕ ಕಡೆಗಳಲ್ಲಿ ಗರಿಷ್ಠ ಉಷ್ಣಾಂಶ 41ರಿಂದ 43 ಡಿ.ಸೆಂ.ನಷ್ಟು ಇರಲಿದೆ. ಕರಾವಳಿ ಭಾಗದಲ್ಲಿ 34ರಿಂದ 35 ಡಿ.ಸೆಂ.ನಷ್ಟು ಇರಲಿದ್ದು, ದಕ್ಷಿಣ ಒಳನಾಡಿನಲ್ಲಿ ಬಹುತೇಕ ಕಡೆಗಳಲ್ಲಿ 33ರಿಂದ 35 ಡಿ.ಸೆಂ.ನಷ್ಟು ಇರಲಿದೆ ಎಂದು ಅವರು ತಿಳಿಸಿದ್ದಾರೆ.





