ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶದ ಮೇರೆಗೂ ಬರ ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಮೋಸ ಮಾಡಿದೆ ಎಂದು, ಪರಿಹಾರ ನೀಡುವಲ್ಲಿ ಅನ್ಯಾಯ ಎಸಗಿದೆ ಎಂದು ಆರೋಪಿಸಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ವಿಧಾನಸೌಧ ಮುಂಭಾಗದ ಗಾಂಧಿ ಪ್ರತಿಮೆ ಬಳಿ ಕೂತು ಕಾಂಗ್ರೆಸ್ ಪಕ್ಷದ ನಾಯಕರು ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿದರು. ಇವರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಸಾಥ್ ನೀಡಿದರು.
ಖಾಲಿ ಚೊಂಬು ಹಿಡಿದು, ಬಿಜೆಪಿ ವಿರುದ್ಧದ ಪೋಸ್ಟರ್ ಹಿಡಿದುಕೊಂಡು ಪ್ರತಿಭಟನೆ ನಡೆಸಿದರು. ಇನ್ನು ಈ ಪೋಸ್ಟರ್‌ನಲ್ಲಿ ಬರ ಪರಿಹಾರಕ್ಕೆ ನಾವು ಕೇಳಿದ್ದು, 18,174 ಸಾವಿರ ಕೋಟಿ ರೂ. ಆದರೆ ನಮಗೆ ಸಿಕ್ಕಿದ್ದು 3,454 ಸಾವಿರ ಕೋಟಿ ರೂ. ಆಗಿದೆ. ಸುಪ್ರೀಂ ಕೊರ್ಟ್‌ನಿಂದ ಆದೇಶ ಬಂದಿದ್ದರು ಸೂಕ್ತ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ಹೊರ ಹಾಕಿದರು.
ಸಚಿವರಾದ ಡಾ. ಜಿ ಪರಮೇಶ್ವರ್, ಕೃಷ್ಣಬೈರೇಗೌಡ, ರಾಮಲಿಂಗರೆಡ್ಡಿ, ದಿನೇಶ್ ಗೂಂಡೂರಾವ್, ಚೆಲುವರಾಯಸ್ವಾಮಿ ಜತೆಯಲ್ಲಿದ್ದರು.





