Mysore
23
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಇಂಧನ ಸಂರಕ್ಷಣೆಯಲ್ಲಿ ಕರ್ನಾಟಕ 2ನೇ ಸ್ಥಾನ

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಸಾಧನೆಗೆ ಪ್ರಶಸ್ತಿ

ಬೆಂಗಳೂರು: ಇಂಧನ ಸಂರಕ್ಷಣೆಯಲ್ಲಿ ಕರ್ನಾಟಕವು ರಾಷ್ಟ್ರಮಟ್ಟದಲ್ಲಿ ಎರಡನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನದ ಅಂಗವಾಗಿ ಬ್ಯೂರೋ ಆಫ್ ಎನರ್ಜಿ ಎಫಿಷಿಯೆನ್ಸಿ ದೆಹಲಿಯ ವಿಜ್ಞಾನ ಭವನದಲ್ಲಿ ಡಿಸೆಂಬರ್‌ 14ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕ್ರೆಡಲ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ರುದ್ರಪ್ಪಯ್ಯ ಈ ಪ್ರಶಸ್ತಿ ಸ್ವೀಕರಿಸಿದರು.

ವಿವಿಧ ರಾಜ್ಯಗಳಲ್ಲಿ ಇಂಧನ ದಕ್ಷತೆಗೆ ರಾಜ್ಯಗಳಲ್ಲಿ ಜಾರಿಗೊಳಿಸಿರುವ ಕಾರ್ಯಕ್ರಮಗಳ ಕುರಿತಂತೆ ಆಯಾ ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಈ ಪ್ರಶಸ್ತಿ ನೀಡಲಾಗುತ್ತದೆ. ಇಂಧನ ದಕ್ಷತೆಯಲ್ಲಿ ಉತ್ತಮ ಸಾಧನೆ ಮಾಡಿರುವ ಕರ್ನಾಟಕಕ್ಕೆ ಈ ಬಾರಿ ಎರಡನೇ ಸ್ಥಾನ ದೊರೆತಿದೆ.

ರಾಜ್ಯಾದ್ಯಂತ ಸುಸ್ಥಿರ ಇಂಧನ ಪದ್ಧತಿಗಳನ್ನು ಉತ್ತೇಜಿಸುವ ಕ್ರೆಡಲ್‌, ಈ ನಿಟ್ಟಿನಲ್ಲಿ ಅನುಷ್ಠಾನಗೊಳಿಸಿರುವ ಇಂಧನ ದಕ್ಷತೆ ಯೋಜನೆಗಳನ್ನು ಗುರುತಿಸಿ ಕೇಂದ್ರ ಇಂಧನ ಸಚಿವಾಲಯ ಈ ಪ್ರಶಸ್ತಿ ನೀಡಿದೆ.

ಸಂತಸ ವ್ಯಕ್ತಪಡಿಸಿದ ಇಂಧನ ಸಚಿವ ಕೆ.ಜೆ. ಜಾರ್ಜ್‌

ಇಂಧನ ಸಂರಕ್ಷಣೆಯಲ್ಲಿ ರಾಜ್ಯಕ್ಕೆ ರಾಷ್ಟ್ರಮಟ್ಟದಲ್ಲಿ ಎರಡನೇ ಪ್ರಶಸ್ತಿ ಸಂದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಇಂಧನ ಸಚಿವ ಕೆ.ಜೆ. ಜಾರ್ಜ್‌, “ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನದ ಸವಾಲುಗಳನ್ನು ಎದುರಿಸುವಲ್ಲಿ ಇಂಧನ ಸಂರಕ್ಷಣೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಇಂಧನ ಸಂರಕ್ಷಣೆ, ಸ್ವಚ್ಛ ಮತ್ತು ಹಸಿರು ಇಂಧನದ ಉಪಕ್ರಮಗಳಿಗೆ ನಮ್ಮ ಸರ್ಕಾರ ಒತ್ತು ನೀಡುತ್ತದೆ. ಇಂಧನ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವುದರ ಜತೆಗೆ ಇನ್ನೂ ಹೆಚ್ಚಿನ ದಕ್ಷತೆ ಸಾಧಿಸುವ ಬಗ್ಗೆ ಗಮನ ಹರಿಸಲಾಗುವುದು,” ಎಂದು ಸಚಿವರು ತಿಳಿಸಿದ್ದಾರೆ.

“ಇಂಧನ ದಕ್ಷತೆಯ ನೀತಿಗಳ ಅನುಷ್ಠಾನದಲ್ಲಿ ರಾಜ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ನಿಟ್ಟನಿಲ್ಲಿ ಸರಿಯಾದ ಪದ್ಧತಿಗಳನ್ನು ಅನುಸರಿಸುವ ಮೂಲಕ ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಸಾಧಿಸಲು ರಾಜ್ಯ ಬದ್ಧವಾಗಿದೆ”,” ಎಂದು ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಹೇಳಿದ್ದಾರೆ.

ಪ್ರಶಸ್ತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ರುದ್ರಪ್ಪಯ್ಯ, “ಇಂಧನ ಸಂರಕ್ಷಣೆಗೆ ಬದ್ಧವಾಗಿರುವ ಕ್ರೆಡಲ್‌ಗೆ ಈ ಮನ್ನಣೆ ದೊರೆತಿರುವುದು ಹೆಮ್ಮೆಯ ವಿಷಯ. ಮುಂದಿನ ಐದು ವರ್ಷಗಳಲ್ಲಿ 5 ಪ್ರಮುಖ ವಲಯಗಳಲ್ಲಿ ಸರಿಸುಮಾರು 744 ಮಿಲಿಯನ್‌ ಯೂನಿಟ್‌ ಇಂಧನ ಉಳಿತಾಯದ ಗುರಿಯನ್ನು ಸಾಧಿಸಲು ಸರ್ಕಾರಿ ಮತ್ತು ಖಾಸಗಿ ಪಾಲುದಾರರೊಂದಿಗೆ ಕೆಲಸ ಮಾಡಲಿದ್ದೇವೆ,” ಎಂದರು

ಕರ್ನಾಟಕವು ಹಿಂದಿನ ಮೂರು ವರ್ಷಗಳಿಂದ, ಅಂದರೆ ಎಸ್‌.ಇ.ಇ.ಐ 2020 ಮತ್ತು ಎಸ್‌.ಇ.ಇ.ಐ 2021-2022, 2023ರ ಅವಧಿಯಲ್ಲಿ “ಫ್ರಂಟ್ ರನ್ನರ್” ಎಂಬ ಮನ್ನಣೆಗೆ ಪಾತ್ರವಾಗಿತ್ತು. ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ, ರಾಜ್ಯ ಇಂಧನ ದಕ್ಷತೆ ಸೂಚ್ಯಂಕ (ಎಸ್‌.ಇ.ಇ.ಐ) 2023ರಲ್ಲಿ ಕರ್ನಾಟಕವು 85.75 ಅತ್ಯಧಿಕ ಅಂಕಗಳನ್ನು ಗಳಿಸುವ ಮೂಲಕ ದೇಶದಲ್ಲೇ ಉತ್ತಮ ಕಾರ್ಯನಿರ್ವಹಣೆಯ ರಾಜ್ಯ ಎಂಬ ಸ್ಥಾನ ಪಡೆದಿತ್ತು. ಈ ಬಾರಿ ರಾಜ್ಯ ಎರಡನೇ ಸ್ಥಾನದಲ್ಲಿದ್ದು, ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ.

Tags: