ಮೈಸೂರು: ನಗರದ ಉದಯಗಿರಿ ಪೊಲೀಸ್ ಠಾಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಪಕ್ಷ ಮೈಸೂರಿನಲ್ಲಿ ಪ್ರತಿಭಟನೆ ನಡೆಸಲು ಹೈಕೋರ್ಟ್ ಷರತ್ತು ಬದ್ಧ ಅನುಮತಿ ನೀಡಿದೆ.
ಉದಯಗಿರಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆಗೆ ಅನುಮತಿ ನೀಡಲು ನಿರಾಕರಿಸಿದ್ದನ್ನು ಪ್ರಶ್ನಿಸಿ ಇಂದು(ಫೆಬ್ರವರಿ.24) ಬಿಜೆಪಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿ ವಿಚಾರಣೆಯನ್ನು ನಡೆಸಿದ ಹೈಕೋರ್ಟ್, ಬಿಜೆಪಿ ಪ್ರತಿಭಟನೆಗೆ ಅನುಮತಿ ನೀಡಿದ್ದು, ಷರತ್ತು ಬದ್ಧ ನಿಯಮಗಳನ್ನು ವಿಧಿಸಿದೆ. ಅಲ್ಲದೇ ಈ ಪ್ರತಿಭಟನೆಯನ್ನು ಶಾಂತಿಯುತವಾಗಿ ನಡೆಸಬೇಕು. ಧರಣಿಯ ವೇಳೆ ವಿಡಿಯೋ ಮಾಡಬೇಕು ಎಂದು ಮೈಸೂರು ಆಯುಕ್ತರಿಗೆ ಸೂಚನೆ ನೀಡಿದೆ.
ಹೈಕೋರ್ಟ್ ಹೇಳಿದ್ದೇನು?
ಬಜೆಪಿ ಪ್ರತಿಭಟನೆಯನ್ನು ಇಂದು ಮಧ್ಯಾಹ್ನ 3.30 ಗಂಟೆಯ ವೇಳೆಗೆ ಫುಟ್‌ಬಾಲ್ ಮೈದಾನದಲ್ಲಿ ಪ್ರತಿಭಟನೆಗೆ ಅನುಮತಿ ನೀಡಿದ್ದು, ಧರಣಿಯಲ್ಲಿ 300 ಕ್ಕಿಂತ ಅಧಿಕ ಮಂದಿ ಸೇರುವಂತಿಲ್ಲ. ಧರಣಿ ಸಂದರ್ಭದಲ್ಲಿ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಬಾರದು ಎಂದು ಆದೇಶಿಸಿದೆ.
ಇನ್ನು ಪ್ರತಿಭಟನೆ ಆಯೋಜಕರಿಗೆ 1 ಲಕ್ಷ ರೂ. ದಂಡ ವಿಧಿಸಲು ತಿಳಿಸಿದ್ದು, ಪ್ರತಿಭಟನೆಯ ವೇಳೆ ಅಹಿತಕರ ಘಟನೆ ಸಂಭವಿಸಿದರೆ ಅರ್ಜಿದಾರರೇ ಹೊಣೆಯಾಗಿರುತ್ತಾರೆ ಎಂದು ತಿಳಿಸಿದೆ.