ಇಂದು ( ಜನವರಿ 18 ) ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಗಿದ್ದು, ವಿಶ್ವಗುರು ಬಸವಣ್ಣನವರನ್ನು ʼಕರ್ನಾಟಕದ ಸಾಂಸ್ಕೃತಿಕ ನಾಯಕʼ ಎಂದು ಘೋಷಿಸಬೇಕು ಎಂಬ ನಿರ್ಧಾರವನ್ನೂ ಸಹ ಮಾಡಲಾಗಿದೆ.
ಸಚಿವ ಸಂಪುಟ ಸಭೆ ಮುಗಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಈಶ್ವರ್ ಖಂಡ್ರೆ ಈ ಬಗ್ಗೆ ಮಾತನಾಡಿದ್ದು, ಅಧಿಕೃತ ಘೋಷಣೆ ಹೊರಡಿಸುವುದೊಂದೇ ಬಾಕಿ ಉಳಿದಿದೆ.
ಸಚಿವ ಸಂಪುಟ ಸಭೆ ಮುಗಿದ ಬಳಿಕ ಮಾಧ್ಯಮದವರ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ “ಸಾಮಾಜಿಕ ನ್ಯಾಯದ ಮೊದಲ ಹರಿಕಾರ ಬಸವಣ್ಣನವರನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕʼ ಎಂದು ಘೋಷಿಸಲು ಇಂದು ನನ್ನ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ತೀರ್ಮಾನಿಸಿದೆ. ಸರ್ಕಾರದ ಈ ತೀರ್ಮಾನ ಸಿಎಂ ಆದ ನನಗೆ ಅತೀವ ಹೆಮ್ಮೆ, ತೃಪ್ತಿಯನ್ನು ತಂದಿದೆ” ಎಂದು ತಿಳಿಸಿದರು.
ಇನ್ನು ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ವೀರಶೈವ ಲಿಂಗಾಯತ ಸ್ವಾಮೀಜಿಗಳ ನಿಯೋಗ ಬಸವಣ್ಣನವರನ್ನು ʼಕರ್ನಾಟಕದ ಸಾಂಸ್ಕೃತಿಕ ನಾಯಕʼ ಎಂದು ಸರ್ಕಾರದ ಪರವಾಗಿ ಘೋಷಿಸುವಂತೆ ಮನವಿ ಮಾಡಿತ್ತು.