ಬೆಂಗಳೂರು: ಬರ ಘೋಷಣೆಯನ್ನೇ ತಡ ಮಾಡಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿಯಾಗಿ ಮೂರು ತಿಂಗಳು ತಡವಾಗಿ ಬರ ಘೋಷಣೆ ಮಾಡಿದೆ. ಈಗ ಹಿಂಗಾರು ಬರಗಾಲದ ಘೋಷಣೆಯನ್ನೂ ಮಾಡಿಲ್ಲ ಎಂದು ವಿಧಾನಸಭೆಯ ಪ್ರತಿಪ್ಷಕ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಬರಗಾಲದ ನಿರ್ವಹಣೆಯಲ್ಲಿ ವಿಫಲವಾಗಿರುವುದನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಟೀಕಿಸಿದ್ದರು. ಈ ಕುರಿತು ಪತ್ರಿಕೆಗಳಲ್ಲೂ ಅನೇಕ ವರದಿಗಳು ಬಂದಿವೆ. ಆದರೆ ಬರವನ್ನು ಘೋಷಣೆ ಮಾಡಲು ಸರ್ಕಾರ ಮೂರು ತಿಂಗಳು ತೆಗೆದುಕೊಂಡಿದೆ. ಮಾಧ್ಯಮಗಳಲ್ಲಿ ವರದಿ ಬಂದಾಗ, ರೈತರು ಪ್ರತಿಭಟಿಸಿದಾಗಲೇ ಬರಗಾಲ ಘೋಷಿಸಿದ್ದರೆ ಕೇಂದ್ರ ಸರ್ಕಾರದ ತಂಡ ಬೇಗ ಬಂದು ಪರಿಶೀಲನೆ ಮಾಡುತ್ತಿತ್ತು. ಬರ ಘೋಷಣೆಯನ್ನೇ ತಡ ಮಾಡಿ ಈಗ ಕೇಂದ್ರದ ತಪ್ಪು ಎನ್ನುವ ರಾಜ್ಯ ಸರ್ಕಾರಕ್ಕೆ ಮಾನ ಇಲ್ಲ ಎಂದು ದೂರಿದರು.
ಸಚಿವ ಕೃಷ್ಣ ಬೈರೇಗೌಡರು ಅಷ್ಟೊಂದು ಪ್ರತಿಭಾವಂತರಾಗಿದ್ದರೆ ಸಂಸದರಾಗಿ ಅವರೇ ಹೋಗಿ ಪ್ರಶ್ನೆ ಕೇಳಬಹುದಿತ್ತು. ಒಬ್ಬ ರೈತರಿಗೆ 25 ಸಾವಿರ ರೂ. ನೀಡುವ ಬದಲು ಕೇವಲ 2 ಸಾವಿರ ರೂ. ನೀಡಿದ್ದೇವೆ ಎನ್ನುತ್ತಿದ್ದಾರೆ. ಅದರಲ್ಲೂ ಮೋಸ ಮಾಡಲಾಗಿದೆ. ಮತ್ತೆ ಹೊಸ ತಂತ್ರಜ್ಞಾನವೆಂದು ಅದನ್ನೂ ತಡ ಮಾಡಲಾಗಿದೆ. ಕೇಂದ್ರ ಸರ್ಕಾರದ ಹಣದಲ್ಲಿ ಬಾಕಿ ಉಳಿಸಿಕೊಂಡು ಅದೇ ಹಣವನ್ನು ನೀಡಲಾಗುತ್ತಿದೆ. ನಂತರ ಸಿಎಂ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ.
ಕೇರಳ ಸರ್ಕಾರದಂತೆ ಸುಪ್ರೀಂ ಕೋರ್ಟ್‌ನಲ್ಲಿ ಛೀಮಾರಿ ಹಾಕಿಸಿಕೊಳ್ಳುವುದಷ್ಟೇ ಬಾಕಿ ಉಳಿದಿದೆ. ಅಲ್ಲಿನ ಸರ್ಕಾರ ದಿವಾಳಿಯಾದಂತೆ ಇಲ್ಲೂ ಸರ್ಕಾರ ದಿವಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
900 ರೈತರು ಆತ್ಮಹತ್ಯೆ ಮಾಡಿಕೊಂಡರೂ ಸಿಎಂ ಸಿದ್ದರಾಮಯ್ಯ ಅವರಿಗೆ ಕರುಣೆ ಇಲ್ಲ. ಒಂದು ವರ್ಷದಲ್ಲೇ ಫ್ರೀ ಫ್ರೀ ಎಂದು ಅಭಿವೃದ್ಧಿಗೆ ಹಣ ಇಲ್ಲ. ಒಂದು ರಸ್ತೆ, ತಾಲೂಕು ಆಸ್ಪತ್ರೆ, ಶಾಲೆ ಯಾವುದನ್ನೂ ಕಟ್ಟಿಸಿಲ್ಲ. ರಸ್ತೆಗಳನ್ನು ನೋಡಿದರೆ ಒಂದು ದೇಶದ ಆರ್ಥಿಕ ಸ್ಥಿತಿ ಹೇಗಿದೆ ಎಂದು ತಿಳಿಯುತ್ತದೆ ಎಂಬ ಮಾತಿದೆ. ಆದರೆ ರಾಜ್ಯ ಸರ್ಕಾರ ಯಾವ ರಸ್ತೆ ನಿರ್ಮಿಸಿದೆ? ಸಚಿವ ಅಮಿತ್ ಶಾ ಸರಿಯಾಗಿಯೇ ಹೇಳಿದ್ದು, ಸಿಎಂ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡುವುದೇ ಸೂಕ್ತ ಎಂದರು.