ಬೆಳಗಾವಿ : ಬೆಲೆ ಏರಿಕೆಗೆ ಖಂಡನೆಯನ್ನ ವ್ಯಕ್ತಪಡಿಸಿ ಕರ್ನಾಟಕ ಬಿಜೆಪಿ ಮುಂದಿನ ತಿಂಗಳು ಸಿಎಂ ಸಿದ್ದರಾಮಯ್ಯನವರ ನಿವಾಸಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದೆ.
ಬೆಳಗಾವಿಯಲ್ಲಿಂದು ಈ ಕುರಿತು ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ್, ಬೆಲೆ ಏರಿಕೆ ಖಂಡಿಸಿ ಜುಲೈ 3 ಅಥವಾ 4ರಂದು ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕುತ್ತೇವೆ. ಕರ್ನಾಟಕ ಸರ್ಕಾರ ಒಂದು ರೀತಿ ಹುಚ್ಚರ ಸಂತೆಯಾಗಿದೆ.ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿದ್ದಾಯ್ತು ಇದೀಗ ಹಾಲಿನ ದರ ಲೀಟರ್ ಗೆ 2 ರೂಪಾಯಿ ಏರಿಕೆ ಮಾಡಿದ್ದಾರೆ. ಒಂದೇ ವರ್ಷದಲ್ಲಿ ಎರಡು ಬಾರಿ ಹಾಲಿನ ದರ ಏರಿಕೆ ಮಾಡಿದ್ದಾರೆ. ಗ್ಯಾರಂಟಿಗೆ ಹಣ ಹೊಂದಿಸಲು ಆಗದೇ ಬೆಲೆ ಏರಿಕೆ ಮಾಡುತ್ತಿದೆ ಎಂದು ಕಿಡಿಕಾರಿದರು.
ತುಘಲಕ್ ರೀತಿ ಕಾಂಗ್ರೆಸ್ ಸರ್ಕಾರವನ್ನು ನಡೆಸುತ್ತಿದೆ
ಈ ತಿಂಗಳು, ಮುಂದಿನ ತಿಂಗಳು ಸರ್ಕಾರದ ಬಳಿ ಹಣವೇ ಇಲ್ಲ. ಇದೇ ವೇಳೆ ವೇತನ ಪರಿಷ್ಕರಣೆ ಕೂಡ ಕ್ಯಾಬಿನೆಟ್ ಬಳಿ ಬಂದಿದೆ. ಐದಲ್ಲ ಐವತ್ತು ಗ್ಯಾರಂಟಿ ಕೊಡಿ, ಆದರೆ ವೈಜ್ಞಾನಿಕವಾಗಿ ಮಾಡಿ. ತುಘಲಕ್ ರೀತಿ ಕಾಂಗ್ರೆಸ್ ಸರ್ಕಾರವನ್ನು ನಡೆಸುತ್ತಿದೆ. ಚುನಾವಣೆಯಲ್ಲಿ ಜನ ನಿಮ್ಮ ಮುಖಕ್ಕೆ ಮಂಗಳಾರತಿ ಎತ್ತಿದ್ದಾರೆ. ಜನ ಇಷ್ಟು ಛೀಮಾರಿ ಹಾಕಿದ್ರೂ ನಿಮಗೆ ನಾಚಿಗೆ ಆಗಿಲ್ಲ. ಎಂಪಿ ಚುನಾವಣೆಯಲ್ಲಿ ಮತ ಹಾಕಿಲ್ಲ ಎಂದು ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.