Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಅಧಿವೇಶನದ ಮೊದಲ ದಿನವೇ ಸರ್ಕಾರದ ವಿರುದ್ಧ ಬಿಜೆಪಿ ಕೆಂಡಾಮಂಡಲ

ಬೆಂಗಳೂರು: ಕರ್ನಾಟಕ ವಿಧಾನಸಭೆಯ ಮುಂಗಾರು ಅಧಿವೇಶನ ಇಂದಿನಿಂದ ಆರಂಭವಾಗಿದೆ. ಮೊದಲ ದಿನವೇ ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷ ಬಿಜೆಪಿ ಆಕ್ರೋಶ ಹೊರಹಾಕಿದೆ.

ವಾಲ್ಮೀಕಿ, ಮುಡಾ ಹಗರಣ ಹಾಗೂ ಗ್ಯಾರಂಟಿ ಯೋಜನೆಗಳಿಗೆ ರಾಜ್ಯ ಸರ್ಕಾರ ಎಸ್‌ಸಿ, ಎಸ್‌ಟಿ ಹಣ ಬಳಸಿಕೊಂಡಿದೆ. ಇದನ್ನೇ ಅಸ್ತ್ರವಾಗಿಸಿಕೊಂಡಿರುವ ಬಿಜೆಪಿ ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟುಕೊಂಡು ಸದನ ಆರಂಭಕ್ಕೂ ಮುನ್ನ ಪ್ರತಿಭಟನೆ ನಡೆಸಿತು. ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕಿದ ಬಿಜೆಪಿ ನಾಯಕರು, ಸಿಎಂ ಸಿದ್ದರಾಮಯ್ಯ ಹಾಗೂ ವಾಲ್ಮೀಕಿ ನಿಗಮದ ಅಧ್ಯಕ್ಷರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಪ್ರತಿಭಟನೆ ನಡೆಯುತ್ತಿದ್ದ ವೇಳೆಯೇ ಸಿಎಂ ಸಿದ್ದರಾಮಯ್ಯ ಕಾರು ಆಗಮಿಸಿತ್ತು. ಪರಿಣಾಮ ಸಿಎಂ ಸಿದ್ದರಾಮಯ್ಯರಿಗೂ ಪ್ರತಿಭಟನೆಯ ಬಿಸಿ ತಟ್ಟಿತು.

ಇನ್ನೂ ಆಂಧ್ರಪ್ರದೇಶದತ್ತ ತೆರಳಿದ್ದ ಕೈ ಶಾಸಕ ಬಸನಗೌಡ ದದ್ದಲ್‌ ಇಂದು ವಿಧಾನಸೌಧದಲ್ಲಿ ಪ್ರತ್ಯಕ್ಷರಾಗಿ ಎಲ್ಲರಿಗೂ ಆಶ್ಚರ್ಯ ಮೂಡಿಸಿದರು.

ಸದನದ ಹೊರಗೆ ದೊಡ್ಡ ಪ್ರತಿಭಟನೆ ನಡೆಸಿದ ಬಿಜೆಪಿ, ಸದನದ ಒಳಗೂ ಪ್ರತಿಭಟನೆ ನಡೆಸಲು ಪ್ಲಾನ್‌ ರೂಪಿಸಿದೆ.

ಕಲಾಪದಲ್ಲಿ ಮುಡಾ ಮತ್ತು ವಾಲ್ಮೀಕಿ ಅಕ್ರಮವನ್ನು ಪ್ರಸ್ತಾಪಿಸಲು ಬಿಜೆಪಿ-ಜೆಡಿಎಸ್‌ ನಿರ್ಧಾರ ಮಾಡಿದ್ದು, ಬಿಜೆಪಿ ಹಾಗೂ ಜೆಡಿಎಸ್‌ ನಾಯಕರ ತಂತ್ರಕ್ಕೆ ಕಾಂಗ್ರೆಸ್‌ ಕೂಡ ಪ್ರತಿತಂತ್ರ ಹಾಕಲು ಸರ್ವ ರೀತಿಯಲ್ಲೂ ಸಜ್ಜಾಗಿದೆ ಎನ್ನಲಾಗಿದೆ.

ಸದ್ಯ ಇಂದು ಅಗಲಿದ ಗಣ್ಯರಿಗೆ ವಿಧಾನಸಭೆ ಕಲಾಪದಲ್ಲಿ ಸಂತಾಸ ಸೂಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಅಸಲಿ ಯುದ್ಧ ಶುರುವಾಗಲಿದೆ ಎನ್ನಲಾಗಿದೆ.

 

Tags: