ಬೆಂಗಳೂರು: ಕನ್ನಡ ಭಾಷೆ ತಮಿಳಿನಿಂದ ಉಗಮವಾಯಿತು ಎಂಬ ಕಾಲಿವುಡ್ ನಟ ಕಮಲ್ ಹಾಸನ್ ವಿರುದ್ಧ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕಮಲ್ ಹಾಸನ್ ಹೇಳಿಕೆ ದುರುದ್ದೇಶಪೂರಿತ ಹಾಗೂ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವಂತಾಗಿದೆ. ಈ ಹೇಳಿಕೆ ಅವರ ಅಜ್ಞಾನವನ್ನು ಬಯಲುಗೊಳಿಸುತ್ತದೆ. ಕನ್ನಡ ಮತ್ತು ತಮಿಳು ಭಾಷೆಗಳು ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದ್ದರೂ, ಇವು ತಮ್ಮದೇ ಆದ ಸ್ವತಂತ್ರ ಇತಿಹಾಸ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಹೊಂದಿದೆ.
ಇದನ್ನೂ ಓದಿ:- ಕನ್ನಡದ ಬಗ್ಗೆ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ವಿರುದ್ಧ ಸಿಡಿದೆದ್ದ ಕನ್ನಡಪರ ಸಂಘಟನೆಗಳು
ಕನ್ನಡ ಭಾಷೆಗೆ ಸುಮಾರು 4600-5000 ವರ್ಷಗಳ ಇತಿಹಾಸವಿದೆ. ಕಮಲ್ ಹಾಸನ್ ಅವರ ಹೇಳಿಕೆಯಿಂದ ಕನ್ನಡಿಗರು ಹಾಗೂ ತಮಿಳರ ನಡುವೆ ದ್ವೇಷ ಹುಟ್ಟುಹಾಕುವ ಕೆಲಸವಾಗುತ್ತಿದೆ. ಅವರು ತಕ್ಷಣವೇ ತಮ್ಮ ತಪ್ಪನ್ನು ಸರಿಪಡಿಸಿಕೊಂಡು ಕನ್ನಡಿಗರ ಭಾವನೆಗಳಿಗೆ ಗೌರವ ತೋರಬೇಕೆಂದು ಒತ್ತಾಯಿಸುತ್ತೇವೆ ಎಂದು ಹೇಳಿದರು.





