Mysore
13
clear sky

Social Media

ಸೋಮವಾರ, 15 ಡಿಸೆಂಬರ್ 2025
Light
Dark

ಕಾಂತರಾಜು ವರದಿ ತಿರಸ್ಕಾರಕ್ಕೆ ಒತ್ತಾಯ

ಬೆಂಗಳೂರು : ಕಾಂತರಾಜು ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸಿದ್ಧಪಡಿಸಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷಾ ವರದಿ ಅನುಷ್ಠಾನಗೊಳಿಸಬಾರದು. ಒಂದು ವೇಳೆ ಸಮೀಕ್ಷೆಯ ಅಗತ್ಯವಿದ್ದರೆ ಮತ್ತೊಮ್ಮೆ ವೈಜ್ಞಾನಿಕ ಸಮೀಕ್ಷೆ ನಡೆಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವನ್ನು ಒಕ್ಕಲಿಗರ ಸಮುದಾಯ ಮಾಡಿದೆ.

ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಚಿಂತನ-ಮಂಥನ ಸಭೆ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಸುದೀರ್ಘ ಚರ್ಚೆ ನಡೆಸಿ ಕಾಂತರಾಜು ವರದಿಯನ್ನು ತಿರಸ್ಕರಿಸುವಂತೆ ಸರ್ಕಾರದ ಮೇಲೆ ಒತ್ತಡ ತರಲು ತೀರ್ಮಾನಿಸಲಾಗಿದೆ.ವರದಿಯೂ ಅವೈಜ್ಞಾನಿಕವಾಗಿದ್ದು, ದೋಷ ಪೂರಿತವಾಗಿದೆ. ವರದಿ ಅನುಷ್ಠಾನವಾದರೆ ಕೇವಲ ಒಕ್ಕಲಿಗ ಸಮುದಾಯ ಅಷ್ಟೇ ಅಲ್ಲ, ಇತರೆ ಸಮುದಾಯಗಳಿಗೂ ತೊಂದರೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂಥನಾಥ ಸ್ವಾಮೀಜಿ, ಪಟ್ಟನಾಯಕನಹಳ್ಳಿ ಸಟಿಕಪುರಿ ಮಹಾಸಂಸ್ಥಾನದ ಶ್ರೀ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ನಡೆದ ಚಿಂತನ-ಮಂಥನ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಅಲ್ಲದೆ, ಮೀಸಲಾತಿಯಿಂದ ಸಮುದಾಯಕ್ಕಾಗುತ್ತಿರುವ ಅನ್ಯಾಯದ ಬಗ್ಗೆ ಚರ್ಚೆ ನಡೆಸಲಾಗಿದೆ. ಸಂಘ- ಸಂಸ್ಥೆಗಳ ಜತೆಗೂಡಿ ಪಕ್ಷಾತೀತವಾಗಿ ಒಟ್ಟಾಗಿ ಒಕ್ಕಲಿಗ ಸಮುದಾಯದ ಹಿತರಕ್ಷಣೆಗೆ ಶ್ರಮಿಸಲು ನಿರ್ಧರಿಸಲಾಗಿದೆ.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀ ನಿರ್ಮಲಾನಂಥನಾಥ ಸ್ವಾಮೀಜಿ ಅವರು ಕಾಂತರಾಜು ಅಧ್ಯಕ್ಷರಾಗಿದ್ದ ಅವಯಲ್ಲಿ ತಯಾರಿಸಿದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿಯೂ ದೋಷಪೂರಿತವಾಗಿದೆ. ಈ ವರದಿಯನ್ನು ಸರ್ಕಾರ ಸ್ವೀಕರಿಸಬಾರದು, ಸ್ವೀಕರಿಸಿದರೂ ಅನುಷ್ಠಾನಗೊಳಿಸಬಾರದು. 8 ವರ್ಷಗಳ ಹಿಂದೆ ತಯಾರಿಸಿದ ವರದಿ ಅವೈಜ್ಞಾನಿಕವಾಗಿದೆ. ಒಂದು ವೇಳೆ ವರದಿ ಅನುಷ್ಠಾನಗೊಳಿಸಬೇಕೆಂದಾದರೆ, ಹೊಸದಾಗಿ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ವರದಿ ಪಡೆಯಲಿ. ಅಲ್ಲದೆ, ಮೀಸಲಾತಿ ವಿಚಾರದಲ್ಲಿ ಸರ್ಕಾರ ಸ್ಪಷ್ಟ ನಿಲುವು ತಳೆಯಬೇಕು. ಈ ಸಂಬಂಧ ಮುಖ್ಯಮಂತ್ರಿ ಅವರಿಗೆ ಸೌಜನ್ಯವಾಗಿ ಮನವಿ ಮಾಡಲು ತೀರ್ಮಾನಿಸಲಾಗಿದೆ ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!