ಬೆಂಗಳೂರು: ಕನ್ನಡದ ಭಾಷೆಯ ಮೂಲದ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿರುವ ನಟ ಕಮಲ್ ಹಾಸನ್ ತಮ್ಮ ಮುಂಬರುವ ಚಿತ್ರ ’ಥಗ್ ಲೈಫ್’ ಬಿಡುಗಡೆ ಮತ್ತು ಪ್ರದರ್ಶನಕ್ಕೆ ರಕ್ಷಣೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಕನ್ನಡ ಭಾಷೆ ತಮಿಳಿನಿಂದ ಹುಟ್ಟಿತು ಎಂದು ಕಮಲ್ ಹಾಸನ್ ನೀಡಿದ್ದ ಹೇಳಿಕೆ ಕರ್ನಾಟಕದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ಈ ಹೇಳಿಕೆಗೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಜೂ. 5ರಂದು ಚಿತ್ರಮಂದಿರಗಳಲ್ಲಿ ಥಗ್ ಲೈಫ್ ಬಿಡುಗಡೆಯಾಗುವುದನ್ನು ತಡೆಯಬೇಕೆಂಬ ಒತ್ತಾಯದ ನಡುವೆ, ರಾಜ್ಯದಲ್ಲಿ ಯಾವುದೇ ಅಡಚಣೆ ಉಂಟಾಗದಂತೆ ಕಾನೂನು ಹಸ್ತಕ್ಷೇಪವನ್ನು ಕಮಲ್ ಹಾಸನ್ ಕೋರಿದ್ದಾರೆ.
ಪ್ರದರ್ಶನಕ್ಕೆ ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳುವಂತೆ ಪೊಲೀಸ್ ಮಹಾನಿರ್ದೇಶಕರು ಮತ್ತು ನಗರ ಪೊಲೀಸ್ ಆಯುಕ್ತರಿಗೆ ಸೂಚನೆಗಳನ್ನು ನೀಡುವಂತೆ ಸೇರಿ ಅನೇಕ ಅಂಶಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.





