ತುಮಕೂರು: ರಾಜ್ಯದಲ್ಲಿ ಹನಿಟ್ರ್ಯಾಪ್ ವಿಚಾರ ಭಾರೀ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಹನಿಟ್ರ್ಯಾಪ್ ರಹಸ್ಯವನ್ನು ಬಿಚ್ಚಿಟ್ಟು ಗೃಹ ಸಚಿವರಿಗೆ ಮೂರು ಪುಟಗಳಲ್ಲಿ ದೂರು ನೀಡುತ್ತೇನೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ತುಮಕೂರಿನಲ್ಲಿ ಇಂದು(ಮಾರ್ಚ್.25) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಹನಿಟ್ರ್ಯಾಪ್ ಯತ್ನದ ಬಗ್ಗೆ ನಾನು ಗೃಹ ಸಚಿವರಿಗೆ ದೂರು ನೀಡುತ್ತೇನೆ. ನನ್ನನ್ನು ಟಾರ್ಗೆಟ್ ಮಾಡಿ ಎರಡೂ ಬಾರಿ ಹನಿಟ್ರ್ಯಾಪ್ ಮಾಡಲು ಪ್ರಯತ್ನ ನಡೆದಿತ್ತು ಎಂದರು.
ಯುವಕನೋರ್ವನಿಂದ ಈ ಘಟನೆ ನಡೆದಿದ್ದು, ಪ್ರತಿ ಬಾರಿಯೂ ಬೇರೆ, ಬೇರೆ ಯುವತಿಯರನ್ನು ಕರೆ ತರುತ್ತಿದ್ದ. ಆದರೆ ಹನಿಟ್ರ್ಯಾಪ್ ಮಾಡಲು ಎರಡೂ ಬಾರಿ ಯತ್ನಿಸಿದಾಗಲೂ ಆ ಯುವತಿಯರನ್ನು ಹೈಕೋರ್ಟ್‌ನ ವಕೀಲೆಯರೆಂದು ಪರಿಚಯಿಸಿದ್ದ ಎಂದು ಹೇಳಿದರು.
ಇನ್ನು ಆ ಯುವತಿಯರು ಮನೆಗೆ ಬಂದು ಹೋದ ಸಿಸಿಟಿವಿ ದೃಶ್ಯ ಇಲ್ಲ, ಅವರು ಬಂದ ಹೋದ ವಿಡಿಯೋ ಇಲ್ಲ. ಅಲ್ಲದೇ ಹನಿಟ್ರ್ಯಾಪ್ ಮಾಡುವ ದಾಖಲೆ ನನ್ನ ಬಳಿ ಇಲ್ಲ. ಆದರೆ ಹುಡಗಿರನ್ನು ಕರೆ ತರುತ್ತಿದ್ದ ಯುವಕ ಎರಡೂ ಬಾರಿಯೂ ಕೂಡ ವಕೀಲೆ ಎಂದಿದ್ದ ಎಂದು ತಿಳಿಸಿದರು.





