ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ 2025-26ನೇ ಸಾಲಿನ ಬಜೆಟ್ ಸಾಲ ಮಾಡಿ ಜನರ ಮೂಗಿಗೆ ತುಪ್ಪ ಸವರಿದ ಹಾಗೇ ಇದೆ ಎಂದು ಜೆಡಿಎಸ್ ವ್ಯಂಗ್ಯ ಮಾಡಿದೆ.
ಈ ಕುರಿತು ಸಾಮಾಜಿಕ ಮಾಧ್ಯಮ ತಮ್ಮ ಎಕ್ಸ್ ಖಾತೆಯಲ್ಲಿ ಸರಣಿ ಪೋಸ್ಟ್ ಮಾಡಿರುವ ಜೆಡಿಎಸ್ ಸಾಲ ಮಾಡಿ ಜನರ ಮೂಗಿಗೆ ತುಪ್ಪ ಸವರಿದ ಸಿದ್ದರಾಮಯ್ಯ ಅವರು 4.09 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿದ್ದಾರೆ. ಅದರಲ್ಲಿ 1.16 ಲಕ್ಷ ಕೋಟಿ ರೂ. ಹೊಸದಾಗಿ ಸಾಲ ಬೇಡುತ್ತಿದ್ದಾರೆ. ಹಾಗಾಗಿ ಅವರು ಸಾಲರಾಮಯ್ಯ ಆಗಿದ್ದಾರೆ ಎಂದು ಲೇವಡಿ ಮಾಡಿದೆ.
2025-26ರ ಅಂತ್ಯಕ್ಕೆ ಕರ್ನಾಟಕ ರಾಜ್ಯದ ಒಟ್ಟು ಸಾಲ 7,64,655 ಕೋಟಿ ರೂಪಾಯಿಗಳು. ಅದರಲ್ಲಿ ಸರ್ಕಾರದ ಖರ್ಚು, ಸರ್ಕಾರಿ ನೌಕರರ ಸಂಬಳ, ಪಿಂಚಣಿಗೆ ಸರ್ಕಾರದ ಬಳಿ ಆದಾಯವಿಲ್ಲದೇ, ಖರ್ಚು ನಿಭಾಯಿಸಲು 19,262 ಕೋಟಿ ರೂ. ಸಾಲ ಪಡೆಯಲಾಗುತ್ತಿದೆ. ಅಲ್ಲದೇ
ಬಜೆಟ್‌ನ ಅಂದಾಜು ಶೇ.30% ಹಣವನ್ನು ಸಾಲ ಮಾಡಿ ರಾಜ್ಯದ ಜನರ ಮೂಗಿಗೆ ತುಪ್ಪ ಸವರಲು ಹೊರಟಿರುವ ಮೂಲಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ದಿವಾಳಿ ರಾಜ್ಯ ಸರ್ಕಾರವಾಗಿದೆ ಎಂದು ವಾಗ್ದಾಳಿ ನಡೆಸಿದೆ.
ಕನ್ನಡದ್ರೋಹಿ ಸಿದ್ದರಾಮಯ್ಯ
ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಶ್ವವಿದ್ಯಾನಿಲಯ ಎಂದು ಮರು ನಾಮಕರಣ ಮಾಡುವ ಅವಶ್ಯಕತೆ ಏನಿತ್ತು ಸಿದ್ದರಾಮಯ್ಯ ಅವರೇ ? ಬೆಂಗಳೂರು ನಗರ ವಿಶ್ವವಿದ್ಯಾನಿಲಯಕ್ಕೂ ಮನಮೋಹನ್ ಸಿಂಗ್ ಅವರಿಗೂ ಏನು ಸಂಬಂಧ ? ಇದು ಕಾಂಗ್ರೆಸ್ ಗುಲಾಮಗಿರಿ ಅಲ್ಲವೇ?, ಕರ್ನಾಟಕದಲ್ಲಿ ಹುಟ್ಟಿದ ಸಾವಿರಾರು ಕನ್ನಡಿಗ ಮಹಾನ್ ಸಾಧಕರು ಇದ್ದರೂ ಅವರು ಯಾರು ಕಾಂಗ್ರೆಸ್ ಸರ್ಕಾರದ ಕಣ್ಣಿಗೆ ಬೀಳಲಿಲ್ಲವೇ ಕನ್ನಡ ದ್ರೋಹಿ ಸಿದ್ದರಾಮಯ್ಯನವರೇ? ಎಂದು ಪ್ರಶ್ನಿಸಿದೆ.
ತುಷ್ಟೀಕರಣ ರಾಜಕೀಯದ ಪಿತಾಮಹ ಸಿದ್ದರಾಮಯ್ಯ
ಮತ ಬ್ಯಾಂಕ್ ರಾಜಕಾರಣಕ್ಕೆ ಒಂದು ಸಮುದಾಯದ ಓಲೈಕೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ, ಬಜೆಟ್‌ನಲ್ಲಿ ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಘೋಷಿಸಿದೆ. ಅಲ್ಲದೇ ತುಷ್ಟೀಕರಣ ರಾಜಕೀಯದ ಪಿತಾಮಹ ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಮುಸ್ಲಿಮರಿಗೆ ಧರ್ಮಾಧಾರಿತ ಮೀಸಲಾತಿ ನೀಡಿರುವುದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯಕ್ಕೆ ವಿರುದ್ಧ ಅಲ್ಲವೇ ಎಂದು ಕಿಡಿಕಾರಿದೆ.





