ಬೆಂಗಳೂರು: ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಸರ್ಕಾರ ಕಳೆದ ಮೂರು ದಿನಗಳಿಂದ ಕೆಆರ್‌ಎಸ್‌ನಿಂದ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಹರಿಸಿ ಕನ್ನಡಿಗರಿಗೆ ದ್ರೋಹ ಮಾಡುತ್ತಿದೆ ಎಂದು ಜೆಡಿಎಸ್ ಕಿಡಿಕಾರಿದೆ.
ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ರಾಜ್ಯದಲ್ಲಿ ಕುಡಿಯುವ ನೀರಿನ ಅಭಾವ ಜಾಸ್ತಿಯಾಗಿದ್ದು, ಬಿರು ಬೇಸಿಗೆಯಲ್ಲಿ ಕಾವೇರಿ ತೀರದ ರೈತರು ನೀರಿಗಾಗಿ ಪಡಬಾರದ ಕಷ್ಟ ಪಡುತ್ತಿದ್ದಾರೆ. ಆದರೆ ಈ ಮಧ್ಯೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಶನಿವಾರವಷ್ಟೆ ಚೆನ್ನೈಗೆ ತೆರಳಿ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲ್ಯಿನ್ ಭೇಟಿಯಾಗಿ ಬಂದ ಮಾರನೇ ದಿನವೇ ಕೆಆರ್‌ಎಸ್‌ನಿಂದ ನೀರು ಹರಿಸಲಾಗಿದೆ ಎಂದು ವಾಗ್ದಾಳಿ ನಡೆಸಿದೆ.
ಮಾರ್ಚ್ 23 (ಭಾನುವಾರ)ರಂದು ಕೆಆರ್‌ಎಸ್ ಜಲಾಶಯದ +80 ಗೇಟ್ ಏಕಾಏಕಿ ತೆರೆದು, 2 ಸಾವಿರ ಕ್ಯೂಸೆಕ್ ಗಿಂತ ಹೆಚ್ಚು ನೀರು ಹರಿದಿದೆ. ಕರ್ನಾಟಕದ ಮೇಕೆದಾಟು ಯೋಜನೆಗೆ ಅವಕಾಶ ಕೊಡುವುದಿಲ್ಲ ಎಂದು ತಮಿಳುನಾಡು ಅಡ್ಡಿ ಪಡಿಸುತ್ತಲೇ ಇದೆ. ಆದರೆ, ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಸರ್ಕಾರ, ತಮಿಳುನಾಡಿಗೆ ಕದ್ದು ಮುಚ್ಚಿ ಕಾವೇರಿ ನೀರು ಹರಿಸಿ ಕನ್ನಡಿಗರಿಗೆ ದ್ರೋಹ ಬಗೆಯುತ್ತ ಕಳ್ಳಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.





