ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಅಧಿಕಾರಕ್ಕಾಗಿ ಒಕ್ಕಲಿಗ ಸಮುದಾಯದ ಮುಂದೆ ಪೆನ್ನು ಪೇಪರ್ ಭಿಕ್ಷೆ ಬೇಡಿದ ನಿಮಗೆ ಈಗ ಸಮುದಾಯ ಕಾಲ ಕಸವಾಗಿದೆ. ಈಗಲಾದರೂ ನಿಮ್ಮ ಸಿಎಂ ಹಾಗೂ ಸಚಿವರುಗಳಿಗೆ ಬುದ್ಧಿ ಹೇಳುವ ಕನಿಷ್ಠ ಧೈರ್ಯ ಮಾಡಿ ಎಂದು ಜೆಡಿಎಸ್ ಪಕ್ಷ ಕಿಡಿಕಾರಿದೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್ ಪಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ನಿಮ್ಮ ಸರ್ಕಾರ ಮಾಡಿಬಿಟ್ಟ ಅಪಚಾರ ಮುಚ್ಚಿಟ್ಟುಕೊಳ್ಳಲು ಒಕ್ಕಲಿಗ ಸಮುದಾಯ ಮತ್ತು ಚಂದ್ರಶೇಖರನಾಥ ಸ್ವಾಮೀಜಿ ಅವರ ಮೇಲೆ ಯಾಕೆ ಕೆಸರೆರೆಚುತ್ತಿದ್ದೀರಿ? ಸ್ವಾಮೀಜಿ ಅವರ ಮೇಲೆ ನೀವು ಎಫ್ಐಆರ್ ಹಾಕಿದ್ದು ಈಗ ಸಮುದಾಯದ ಸಿಟ್ಟಿಗೆ ಕಾರಣವಾಗಿದೆ. ಒಕ್ಕಲಿಗರ ಆಕ್ರೋಶಕ್ಕೆ ನೀವು ಗುರಿಯಾಗಿದ್ದೀರಿ. ಬೀಸುವ ದೊಣ್ಣೆಯಿಂದ ಪಾರಾಗಲು ಜೆಡಿಎಸ್ ಬಗ್ಗೆ ಹೊಸ ಹುಳುಕು ಹುಡುಕುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದೆ.
ಜೆಡಿಎಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಮೇಲೆ ಕೇಸ್ ಕಲಾಗಿತ್ತು ಎಂದು ನೀವು ಬಡಬಡಿಸಿದ್ದೀರಿ! ಹಳೆಯ ವಿಷಯ ಕೆದಕಿದ ನಿಮಗೆ ಆ ಪ್ರಕರಣ ಏನು? ಅದು ಮುಂದೇನಾಯಿತು? ಎನ್ನುವ ಮಾಹಿತಿ ಇಲ್ಲವೇ? ಆ ಪ್ರಕರಣಕ್ಕೂ ಜೆಡಿಎಸ್ ಪಕ್ಷಕ್ಕೂ ಸಂಬಂಧ ಏನು? ಮುಂದೆ ಆ ಪ್ರಕರಣ ರದ್ದಾಯಿತು, ನಿಮಗೆ ಗೊತ್ತಿಲ್ಲವೇ? ಎಂದು ಪ್ರಶ್ನಿಸಿದೆ.
ಚಂದ್ರಶೇಖರ ಸ್ವಾಮೀಜಿ ಅವರ ವಿರುದ್ಧ ನಿಮ್ಮ ಇಡೀ ಕಾಂಗ್ರೆಸ್ ಸರ್ಕಾರವೇ ತೊಡೆತಟ್ಟಿ ನಿಂತಿದ್ದು, ಸಚಿವರುಗಳೆಲ್ಲಾ ಅವರ ಮೇಲೆ ರಕ್ಕಸರಂತೆ ಮುಗಿಬಿದ್ದಿದ್ದಾರೆ. ಅವರ ಹೇಳಿಕೆಯ ಬಗ್ಗೆ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದ ಮೇಲೆಯೂ ಅವರ ಮೇಲೆ ಸರ್ಕಾರ ಯಾರದೋ ನಿರ್ದಿಷ್ಟ ಚಿತಾವಣೆಗೆ ಒಳಗಾಗಿ ಕಾಲು ಕೆರೆದು ಜಗಳಕ್ಕೆ ನಿಂತಿದೆ ಹಾಗೂ ಒಕ್ಕಲಿಗ ಸಮುದಾಯದ ಬಗ್ಗೆ ಅಪಮಾನಕರವಾಗಿ ವರ್ತಿಸುತ್ತಿದೆ. ಓಲೈಕೆ ರಾಜಕೀಯ, ತುಷ್ಟೀಕರಣದ ಪರಾಕಾಷ್ಠೆ ಇದು. ಒಕ್ಕಲಿಗರಿಗೆ ಇದೆಲ್ಲಾ ಅರ್ಥವಾಗುತ್ತಿದೆ ಎಂದು ಹೇಳಿದೆ.