ಬೆಂಗಳೂರು: ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಇದು ಜೆಡಿಎಸ್ ಪಕ್ಷದ ಸ್ಲೋಗನ್ ಅಲ್ಲ. ರಾಜ್ಯದ ಏಳೂವರೆ ಕೋಟಿ ಜನರ ಮನದಾಳದ ಮಾತನ್ನ ನಾವು ಹೇಳಿದ್ದೇವೆ. ನಮ್ಮ ಈ ಹೋರಾಟ ಒಂದು ದಿನದ ಅಭಿಯಾನ ಅಲ್ಲ. ಈ ಹೋರಾಟ ಕಾಂಗ್ರೆಸ್ ಅಧಿಕಾರ ಇರುವವರೆಗೂ ಮುಂದುವರಿಯುತ್ತದೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಾಕಪ್ಪ ಸಾಕು ಎಂಬ ಘೋಷವಾಕ್ಯದೊಂದಿಗೆ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಇಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು, ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಸ್ಥಗಿತಗೊಂಡು ಶೂನ್ಯವಾಗಿದೆ. ಕಾಂಗ್ರೆಸ್ ಎರಡು ವರ್ಷಗಳ ಅಧಿಕಾರದಲ್ಲಿ ರಾಜ್ಯದ ಜನತೆಗೆ ಸಂಕಷ್ಟದ ದಿನಗಳನ್ನ ತಂದೊಡ್ಡಿದೆ. ಬರ್ತ್ ಸರ್ಟಿಫಿಕೇಟ್ ನಿಂದ ಡೆತ್ ಸರ್ಟಿಫಿಕೇಟ್‌ವರೆಗೂ ದರ ಹೆಚ್ಚಳ ಮಾಡಿದ್ದಾರೆ. ಬಸ್, ಮೆಟ್ರೋ, ಆಸ್ಪತ್ರೆ ಶುಲ್ಕ ಎಲ್ಲದರ ಬೆಲೆ ಏರಿಕೆ ಮಾಡಿದ್ದಾರೆ ಎಂದು ಕಿಡಿಕಾರಿದರು.
ಈ ಸರ್ಕಾರದಲ್ಲಿ ನಾವು ತೆಗೆದುಕೊಳ್ಳುವ ಗಾಳಿ ಒಂದು ಬಿಟ್ಟು ಇನ್ನೆಲ್ಲದರ ಬೆಲೆ ಏರಿಕೆ ಮಾಡಿದ್ದಾರೆ. ಸಿಎಂ ಆರ್ಥಿಕ ಸಲಹೆಗಾರರೇ ಕರ್ನಾಟಕದಲ್ಲಿ ಭ್ರಷ್ಟಾಚಾರ ಮೊದಲನೇ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ. ಅವರು ಸತ್ಯವಾದ ಮಾತನ್ನೇ ಹೇಳಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.