ಹಾಸನ: ಕಾಂಗ್ರೆಸ್ ಸರ್ಕಾರದಿಂದ ನಾಳೆ(ಡಿ.5) ನಡೆಸಲಾಗುವ ಜನಕಲ್ಯಾಣ ಸಮಾವೇಶದ ಕುರಿತು ಮೊದಲ ಬಾರಿಗೆ ಹೊಳೆನರಸೀಪುರದ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಇಂದು(ಡಿ.4) ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಹಾಸನದಲ್ಲಿ ಕಾಂಗ್ರೆಸ್ ಸರ್ಕಾರ ಸಮಾವೇಶ ಮಾಡಿದರೆ ಮಾಡಿಕೊಳ್ಳಲಿ. ನಾವು ಅದರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ಈ ಸಮಾವೇಶಕ್ಕೆ 2028ರ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ನೀಡುತ್ತೇವೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಹಾಸನದಲ್ಲಿ ಜೆಡಿಎಸ್ ಅನ್ನು ಟಾರ್ಗೆಟ್ ಮಾಡಿದರೆ ಮಾಡಲಿ. 50 ವರ್ಷಗಳಿಂದ ನಮ್ಮ ಜಿಲ್ಲೆಗೆ ಕಾಂಗ್ರೆಸ್‌ನಿಂದ ಯಾವ ಕೊಡುಗೆಯೂ ಇಲ್ಲ. 2018ರ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಏನಾಯ್ತು? ಕಾಂಗ್ರೆಸ್‌ನವರು ಕೊನೆಗೆ ಎಚ್.ಡಿ.ದೇವೇಗೌಡರ ಬಳಿ ಬರಬೇಕಾಯ್ತು. ಮುಂದಿನ ಚುನಾವಣೆಗೆ ಹಾಸನದಲ್ಲಿ ನಾವು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಸೇರಿ ಮತ್ತೆ ಜೆಡಿಎಸ್ ಅನ್ನು ಅಧಿಕಾರಕ್ಕೆ ತಂದೇ ತರುತ್ತೇವೆ ಎಂದು ತಿಳಿಸಿದ್ದಾರೆ.





