ಬೆಂಗಳೂರು: ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿರುವ ನಗರದ ಕೋಗಿಲು ಲೇಔಟ್‍ನಲ್ಲಿ ವಲಸಿಗರು ಅನಧಿಕೃತವಾಗಿ ಮನೆ ನಿರ್ಮಾಣ ಮಾಡಿಕೊಂಡಿದ್ದರು ಎಂಬುದನ್ನು ಕಂದಾಯ ಸಚಿವ ಕೃಷ್ಣಬೈರೇಗೌಡ ಒಪ್ಪಿಕೊಂಡಿದ್ದಾರೆ.
ಪ್ರಕರಣ ನಡೆದ ನಂತರ ಇದೇ ಮೊದಲ ಬಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ ಕೃಷ್ಣಬೈರೇಗೌಡ ಅವರು, ಕೋಗಿಲು ಲೇಔಟ್‍ನಲ್ಲಿ ನಿಯಮಗಳನ್ನು ಉಲ್ಲಂಘಿಸಿ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ ಎಂಬುದನ್ನು ಬಹಿರಂಗಪಡಿಸಿದರು.
ಇದು ಬಿಬಿಎಂಪಿ ಜಾಗವಾಗಿದ್ದು, ಕಂದಾಯ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ. ನಿವೇಶನ ಯಾರಿಗೆ ಸೇರಿದ್ದರೂ ಅದು ಸರ್ಕಾರದ ಸ್ವತ್ತೆ?. ಇಂತಹ ಜಾಗದಲ್ಲಿ ಮನೆ ನಿರ್ಮಿಸಿದಾಗ ತೆರವುಗೊಳಿಸುವುದು ಅನಿವಾರ್ಯ ಎಂದು ಹೇಳಿದರು.
ಬಿಬಿಎಂಪಿ ಇರಲಿ, ಕಂದಾಯ ಇರಲಿ ಒತ್ತುವರಿಯಾಗಿರುವ ಜಾಗವನ್ನು ನಿರಂತರವಾಗಿ ತೆರವು ಮಾಡಲಾಗುತ್ತದೆ. ಇದು ಆಡಳಿತ ವ್ಯವಸ್ಥೆಯಲ್ಲಿ ನಿರಂತರವಾಗಿ ನಡೆಯುವ ಕೆಲಸ. ಕಂದಾಯ ಇಲಾಖೆಯಲ್ಲಿ ಪ್ರತಿ ಶನಿವಾರ ತೆರವು ನಡೆಯುತ್ತಿರುತ್ತದೆ. ಸರ್ಕಾರಿ ಜಾಗದಲ್ಲಿ ಇರಬಹುದು, ಬಿಬಿಎಂಪಿ ಜಾಗದಲ್ಲಿ ಹಕ್ಕು ಪತ್ರ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಇದು ಒಂದೇ ಪ್ರಕರಣ ಅಲ್ಲ, ಬೇರೆ ಪ್ರಕರಣ ಇದೆ. ಸರ್ಕಾರಿ ಜಾಗವನ್ನು ಭದ್ರ ಮಾಡಲು ತೆರವು ಮಾಡಲಾಗಿದೆ. ತೆರವಾದ ಜಾಗದಲ್ಲಿ ಬಡವರು, ಅರ್ಹರು ಇದ್ದಾರೆ. ಬಹಳ ಕಾಲದಿಂದ ವಾಸ ಮಾಡುತ್ತಿರುವ ಕಾರಣ ಮಾನವೀಯ ದೃಷ್ಟಿಯಿಂದ ಬಡವರಿಗೆ ಮನೆ ನೀಡಲು ಸಿಎಂ ನಿರ್ಧಾರ ಮಾಡಿದ್ದಾರೆ ಎಂದು ತಿಳಿಸಿದರು.





